ಶಿರಾಡಿ ಘಾಟ್: ಮಣ್ಣು ಕುಸಿದು 75 ಅಡಿ ಆಳಕ್ಕುರುಳಿದ ಗ್ಯಾಸ್ ಟ್ಯಾಂಕರ್ ► ಇಬ್ಬರು ಮೃತ್ಯು, ನಾಲ್ಕು ದಿನಗಳ ಕಾಲ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.15. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ಗುಡ್ಡ ಕುಸಿತಕ್ಕೊಳಗಾಗಿದ್ದು, ಆ ಸಮಯದಲ್ಲಿ ಸ್ಥಳದಿಂದಾಗಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರೊಂದು ರಸ್ತೆಯಿಂದ ಕೆಳಕ್ಕೆ ದೂಡಲ್ಪಟ್ಟು ಮಣ್ಣಿನ ಕುಸಿತದ ನಡುವೆ ಬಿದ್ದ ಪರಿಣಾಮ ಚಾಲಕ ಹಾಗೂ ನಿರ್ವಾಹಕರಿಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.

ಮೃತರನ್ನು ಟ್ಯಾಂಕರ್ ಚಾಲಕ ರಾಯಚೂರು ನಿವಾಸಿ ಬಸವರಾಜ್ ಹಾಗೂ ನಿರ್ವಾಹಕ ಕೆ.ಆರ್.ಪೇಟೆಯ ಕಿಕ್ಕೇರಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಹೆದ್ದಾರಿಯಿಂದ ಸುಮಾರು ಎಪ್ಪತ್ತೈದು ಅಡಿ ಆಳಕ್ಕೆ ಟ್ಯಾಂಕರ್ ಉರುಳಿದ ಕಾರಣ ಟ್ಯಾಂಕರ್ ನ ಕ್ಯಾಬಿನ್ ಮಣ್ಣಿನಲ್ಲಿ ಹೂತು ಹೋಗಿದ್ದು, ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ. ಟ್ಯಾಂಕರ್ ನಲ್ಲಿದ್ದ ಗ್ಯಾಸ್ ಪೂರ್ತಿ ಸೋರಿಕೆಯಾಗಿ ಖಾಲಿಯಾಗಿದೆ. ಪದೇ ಪದೇ ಗುಡ್ಡ ಕುಸಿಯುತ್ತಿರುವುದರಿಂದ ಇಂದಿನಿಂದ ಹದಿನೈದು ದಿನಗಳವರೆಗೆ ಘನವಾಹನಗಳ ಸಂಚಾರ ಮತ್ತು ನಾಲ್ಕು ದಿನಗಳ ಕಾಲ ಲಘು ವಾಹನಗಳ ಸಂಚಾರವನ್ನು ಹಾಸನ ಜಿಲ್ಲಾಧಿಕಾರಿಯವರ ಆದೇಶದನ್ವಯ ಸಕಲೇಶಪುರದ ಉಪವಿಭಾಗಾಧಿಕಾರಿ ಯವರು ಆದೇಶ ಹೊರಡಿಸಿದ್ದಾರೆ.

Also Read  ವಿಶ್ವ ಪರಿಸರ ದಿನಾಚರಣಾ ಕಾರ್ಯಕ್ರಮ

error: Content is protected !!
Scroll to Top