ಹೊಸ್ಮಠ ಸೇತುವೆಯ ಮೇಲೆ ನೆರೆ ನೀರು ಇರುವಾಗಲೇ ವಾಹನ ದಾಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ► ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ..?ಸಾರ್ವಜನಿಕರ ಆಕ್ರೋಶ..!!

ಕಡಬ: ಹೊಸಮಠ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ಸೇತುವೆ ಬಳಿ ಕಾವಲು ನಿರತರಾಗಿದ್ದ ಗೃಹ ರಕ್ಷಕ ಸಿಬ್ಬಂದಿಗಳನ್ನು ದಬಾಯಿಸಿ, ಮುಚ್ಚಲಾಗಿದ್ದ ರಕ್ಷಣಾ ಗೇಟುಗಳನ್ನು ತೆರೆದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಅಪಾಯಕಾರಿ ರೀತಿಯಲ್ಲಿ ತನ್ನ ಇಲಾಖಾ ವಾಹನವನ್ನು ಸೇತುವೆಯ ಮೇಲಿನ ನೆರೆ ನೀರಿನಲ್ಲಿ ದಾಟಿಸಿದ ಘಟನೆ ಆ.12ರಂದು ಸಂಜೆ 6.30ರ ಸುಮಾರಿಗೆ ಸಂಭವಿಸಿದೆ.

ರವಿವಾರ ಮಧ್ಯಾಹ್ನದಿಂದಲೇ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದುದರಿಂದ ಯಾವುದೇ ವಾಹನಗಳು ಸೇತುವೆ ಮೇಲೆ ಸಂಚರಿಸಿ ಅವಘಡ ಸಂಭವಿಸಬಾರದೆಂಬ ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಇಕ್ಕೆಲೆಗಳಲ್ಲಿಯೂ ರಕ್ಷಣಾ ಗೇಟುಗಳನ್ನು ಮುಚ್ಚಿ ಗೃಹ ರಕ್ಷಕ ಸಿಬಂದಿ ಕಾವಲು ನಿರತರಾಗಿದ್ದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿಯಿಂದ ಕಡಬದತ್ತ ಪ್ರಯಾಣಿಸುತ್ತಿದ್ದ ವೃತ್ತ ನಿರೀಕ್ಷಕರು ತಮ್ಮ ಸಿಬಂದಿಯ ಮೂಲಕ ಮುಚ್ಚಲಾಗಿದ್ದ ರಕ್ಷಣಾ ಗೇಟನ್ನು ತೆರೆದು ಗೃಹ ರಕ್ಷಕ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಅಪಾಯದ ಬಗ್ಗೆ ಎಚ್ಚರಿಸಿದರೂ, ಇದನ್ನು ಲೆಕ್ಕಿಸದೆ ಸೇತುವೆಯ ಮೇಲೆ ವಾಹನವನ್ನು ದಾಟಿಸಿದರು. ಸೇತುವೆಯ ಇನ್ನೊಂದು ಬದಿಯಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕ ಸಿಬ್ಬಂದಿಸೇತುವೆಯ ಮೇಲೆ ವಾಹನವನ್ನು ದಾಟಿಸಿದ್ದನ್ನು ಪ್ರಶ್ನಿಸಿದಾಗ ಆತನನ್ನು ದಬಾಯಿಸಿದ ವೃತ್ತ ನಿರೀಕ್ಷಕರು ಕಡಬದತ್ತ ತೆರಳಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ: ತಾಯಿ - ಮಗು ಬಲಿಪಡೆದ ಅಪಘಾತ ಪ್ರಕರಣ ➤ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದು ಕಮೆಂಟ್ ಹಾಕಿದ ಆನಂದ್ ವಿರುದ್ದ ಎಸ್ಡಿಪಿಐ ಉಪ್ಪಿನಂಗಡಿ ವತಿಯಿಂದ ದೂರು ದಾಖಲು

ಸಾರ್ವಜನಿಕರ ಆಕ್ರೋಶ: ಈ ಮಧ್ಯೆ ನೆರೆ ನೀರು ಇರುವಾಗಲೇ ವಾಹನ ದಾಟಿಸಲು ರಕ್ಷಣಾ ಗೇಟುಗಳನ್ನು ವೃತ್ತ ನಿರೀಕ್ಷಕರ ಸಿಬಂದಿ ತೆರೆದು ವಾಹನ ದಾಟಿಸುತ್ತಿದ್ದಂತೆಯೇ ಅದಕ್ಕೂ ಮೊದಲೇ ಸೇತುವೆಯ ಬಳಿ ವಾಹನ ದಾಟಿಸಲು ಕಾದು ನಿಂತಿದ್ದ ವಾಹನ ಚಾಲಕರು ತಮ್ಮ ವಾಹನಗಳನ್ನು ಕೂಡ ಸೇತುವೆಯ ಮೇಲೆ ದಾಟಿಸಲು ಮುಂದಾದರು, ಆದರೆ ಕೂಡಲೇ ಗೃಹರಕ್ಷಕ ಸಿಬಂದಿ ಗೇಟನ್ನು ಮುಚ್ಚಿ ವಾಹನ ಸಂಚರಿಸದಂತೆ ತಡೆದರು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ವಾಹನ ಚಾಲಕರು “ಪೊಲೀಸರಿಗೊಂದು ನ್ಯಾಯ ನಮಗೊಂದು ನ್ಯಾಯವೇ” ಎಂದು ಗೃಹ ರಕ್ಷಕ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡರು. ತಿಂಗಳ ಹಿಂದೆ ಕೂಡ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪೊಲೀಸ್ ಇಲಾಖೆಗೆ ಇರಿಸು ಮುರಿಸು ಉಂಟಾಗಿತ್ತು, ಇದೀಗ ಪೊಲೀಸ್ ಅಧಿಕಾರಿಯೇ ಬೇಜವಾಬ್ದಾರಿಯಿಂದ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Also Read  ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ

error: Content is protected !!
Scroll to Top