ಮಂಡೆಕರ: ರಬ್ಬರ್ ನಿಗಮದಿಂದ ರಸ್ತೆಗೆ ಅಡ್ಡಿ – ನ್ಯಾಯಾಲಯ ತಡೆಯಾಜ್ಞೆ ► ತಡೆಯಾಜ್ಞೆಯ ನಡುವೆಯೂ ರಸ್ತೆಗೆ ಅಡ್ಡಿಪಡಿಸಿ ಬೇಲಿ ನಿರ್ಮಾಣದ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಆ.12. ಐತ್ತೂರು ಗ್ರಾಮದ ಮಂಡೆಕರ ಎಂಬಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವತಿಯಿಂದ ರಸ್ತೆ ಬಂದ್ ಮಾಡಿ, ವಿದ್ಯುತ್ ಬೇಲಿ ಅಳವಡಿಕೆಗೆ ಪುತ್ತೂರು ಜೆ.ಎಂ.ಎಫ್.ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಇದ್ದರೂ ಬೇಲಿ ನಿರ್ಮಾಣ ಕಾಮಗಾರಿಯನ್ನು ನಿಗಮ ಮಾಡುತ್ತಿದೆ, ಅಲ್ಲದೆ ಸರಕಾರಿ ಜಾಗದಲ್ಲಿರುವ ರಸ್ತೆಯನ್ನು ಬಂದ್ ಮಾಡಿ ನೆಡುತೋಪು ನಿರ್ಮಾಣ ಮಾಡಲಾಗುತ್ತಿದೆ, ಇದನ್ನು ಆಕ್ಷೇಪಿಸಿರುವುದಕ್ಕೆ ನಿಗಮದ ಅಧಿಕಾರಿಗಳು ತನ್ನ ಮೇಲೆ ವೃಥಾ ದೂರು ದಾಖಲು ಮಾಡುತ್ತಿದ್ದಾರೆ ಎಂದು ಮಂಡೆಕರ ನಾಗಪ್ಪ ಎಂಬವರು ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿ ಐತ್ತೂರು ಗ್ರಾಮದ ಸ.ನಂ.130/2ಸಿ, 130/4ಸಿ ಜಾಗವು ಪಿತ್ರಾರ್ಜಿತವಾಗಿ ಬಂದ ಪಟ್ಟಾ ಸ್ಥಳವಾಗಿದ್ದು ಇದರಲ್ಲಿ ಕೃಷಿ ಹಾಗೂ ಹೈನುಗಾರಿಕೆಯನ್ನು ಮಾಡಲಾಗುತ್ತಿದೆ. ಆದರೆ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮವು ಮೂಜೂರು ವಿಭಾಗ ಮಂಡೆಕರ ಎಂಬಲ್ಲಿ ರಬ್ಬರ್ ನೆಡುತೋಪು ಮಾಡುತ್ತಿದೆ, ನೆಡುತೋಪು ಮಾಡುತ್ತಿರುವ ಪಿತ್ರಾರ್ಜಿತ ಸ್ಥಳದಲ್ಲಿ ಮತ್ತು ಒತ್ತುವರಿಯಾಗಿರುವ ಸ,ನಂ153/1(ಪಿ)1ರಲ್ಲಿ ನೆಡುತೋಪು ಮಾಡುತ್ತಿದ್ದಾರೆ. ಅಲ್ಲದೆ ಅನಾದಿ ಕಾಲದಿಂದಲೂ ಇದ್ದ ರಸ್ತೆಯನ್ನೆ ಬಂದ್ ಮಾಡಿ ಅಲ್ಲಿ ಯಂತ್ರದ ಮೂಲಕ ರಬ್ಬರ್ ತೋಪುಗಳನ್ನು ನಿರ್ಮಾಣ ಮಾಡಲಾಗಿದೆ, ಅಲ್ಲದೆ ವಾಸದ ಮನೆಯ ಪಕ್ಕದಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸಿ ಬೇಲಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ನನಗೆ ಮನೆಗೆ ಬರಲು ರಸ್ತೆಯೇ ಇಲ್ಲದಂತಾಗಿದೆ ಇದನ್ನು ಆಕ್ಷೇಪಿಸಿದಕ್ಕೆ ನನ್ನ ಹಾಗೂ ನನ್ನ ಪತ್ನಿಯ ವಿರುದ್ದ ಸುಳ್ಳು ದೂರುಗಳನ್ನು ದಾಖಲಿಸಿ ಕೇಸು ಮಾಡಿ ನನಗೆ ತೊಂದರೆ ನೀಡಿದ್ದಾರೆ. ಈ ಬಗ್ಗೆ ನಾನು ಭೂಮಿಯ ಸಂಬಂಧಪಟ್ಟ ದಾಖಲೆಯನ್ನು ಕೋರ್ಟಿಗೆ ಸಲ್ಲಿಸಿದ್ದು ನ್ಯಾಯಾಲಯ ಈಗಾಗಲೇ ಬೇಲಿ ನಿರ್ಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದಿದ್ದಾರೆ.

Also Read  ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್

ರಸ್ತೆಗೆ ಅಡ್ಡಿ ಉಂಟು ಮಾಡದಂತೆ ಅಲ್ಲದೆ ಪಟ್ಟಾ ಜಮೀನಿನ 100 ಮೀಟರ್ ದೂರದಲ್ಲಿ ಮುಂದಿನ ಆದೇಶದವರೆಗೆ ಯಾವುದೇ ಹಸ್ತಕ್ಷೇಪ ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಅದನ್ನು ಕ್ಯಾರೆ ಅನ್ನದ ರೀತಿಯಲ್ಲಿ ರಬ್ಬರ್ ನಿಗಮದ ಅಧಿಕಾರಿಗಳು ವರ್ತಿಸಿರುವ ಆರೋಪ ವ್ಯಕ್ತವಾಗಿದೆ. ತಡೆಯಾಜ್ಞೆ ಇದ್ದರೂ ನಾಗಪ್ಪ ಮಂಡೆಕರ ಸೇರಿದಂತೆ ಇತರ ಮನೆಯವರ ಹೋಗುವ ದಾರಿಯನ್ನೆ ಬಂದ್ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಈ ಬಗ್ಗೆ ನಾಗಪ್ಪ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಹೈಕೋರ್ಟ್ ನಲ್ಲಿ ಕೆ.ಎಫ್.ಡಿ.ಸಿ., ಯುನಿಟ್ ಮೇನೇಜರ್, ಮೂಜೂರು ಯುನಿಟ್, ರೇಂಜ್ ಫಾರೆಸ್ಟ್ ಆಫಿಸರ್, ಎ.ಸಿ, ಎಸ್.ಐ. ಕಡಬ ವಿರುದ್ದ 2018 ಮೇ.5,11,15ರ ಮನವಿಗಳನ್ನು ಲೆಕ್ಕಿಸದೆ ಯಾವುದೇ ವಿಮರ್ಶೆ ನಡೆಸದೆ, ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ವಿಸ್ತರಿಸಿರುವ ತೋಟ, ಹಾಕಿರುವ ಬೇಲಿ ಮತ್ತು ಸುಳ್ಳು ದೂರನ್ನು ದಾಖಲಿಸಿರುವ ಕಡಬ ಎಸ್.ಐ. ವಿರುದ್ಧ 2018 ಜೂನ್ 25 ರಂದು ವಿಚಾರಣೆಗೆ ಅಂಗೀಕರಿಸಿ ನೋಟಿಸು ನೀಡಿದೆ. ಹೈಕೋರ್ಟ್ ನಲ್ಲಿ ನ್ಯಾಯವಾದಿ ಕೆ.ಎನ್.ಪ್ರವೀಣ್ ಕುಮಾರ್ ಕಟ್ಟೆಯವರು ವಾದಿಸುತ್ತಿದ್ದಾರೆ.

Also Read  ಇನ್ನುಮುಂದೆ ಜಿಲ್ಲೆಯಲ್ಲಿ ಅಧಿಕಾರಿಗಳು ಹಣದ ಬೇಡಿಕೆಯಿಟ್ಟರೆ ನಿರ್ದಾಕ್ಷಿಣ್ಯ ಕ್ರಮ ➤ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲು ಖಡಕ್ ವಾರ್ನಿಂಗ್.!!


ಈ ಬಗ್ಗೆ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಮೂಜೂರು ಘಟಕದ ಆರ್.ಎಫ್.ಒ ಆಕಾಶ್.ಪಿ ಯಂಕಂಚಿಯವರು ಪ್ರತಿಕ್ರಿಯೆ ನೀಡಿ, ನಮಗೆ ನ್ಯಾಯಾಲಯದಿಂದ ಯಾವುದೇ ಆದೇಶಗಳು ಬಂದಿಲ್ಲ, ನಾವು ಯಾವುದೇ ಅತಿಕ್ರಮಣ ಮಾಡಿಲ್ಲ, ನಾವು ಅರಣ್ಯ ಅಭಿವೃದ್ದಿಗೆ ಮೀಸಲಿಟ್ಟ ಜಾಗದಲ್ಲಿ ನೆಡುತೋಪು ನಿರ್ಮಾಣ ಮಾಡುತ್ತೇವೆ, ನಾವು ಬೇಲಿ ಹಾಕುತ್ತಿರುವಾಗ ನಾಗಪ್ಪ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

error: Content is protected !!
Scroll to Top