(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.08. ಇಬ್ಬರು ಆರೋಪಿಗಳನ್ನು ಬಂಧಿಸಿ ಮೂರು ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸುವ ಮೂಲಕ ನ್ಯಾಯಾಲಯದಲ್ಲಿ `ಸಿ’ ಅಂತಿಮ ವರದಿ ಸಲ್ಲಿಸಲಾಗಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡುವುದರೊಂದಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಉಪ್ಪಿನಂಗಡಿ ಪೊಲೀಸರು ಸಾಬೀತುಪಡಿಸಿದ್ದಾರೆ.
ನೆಲ್ಯಾಡಿ ಸಮೀಪದ ಗೋಳಿತೊಟ್ಟು ಗ್ರಾಮದ ಹೊಸಮನೆ ನಿವಾಸಿ ಕುಂಞಲಿ ಅಬ್ದುಲ್ ನಾಸೀರ್ ಎಂಬವರ ಮನೆಯಲ್ಲಿ 2015 ಡಿಸೆಂಬರ್ 03 ರಂದು ಲಕ್ಷಾಂತರ ರೂಪಾಯಿ ನಗ- ನಗದು ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ಆ ಸಂದರ್ಭ ತನಿಖೆ ನಡೆಸಿದ್ದರಾದರೂ, ಆರೋಪಿಗಳ ಪತ್ತೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಈ ಪ್ರಕರಣವನ್ನು ತಾತ್ಕಾಲಿಕ ಆರೋಪಿ ಮತ್ತು ಸೊತ್ತು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ನ್ಯಾಯಾಲಯಕ್ಕೆ `ಸಿ’ ರಿಪೋರ್ಟ್ ಸಲ್ಲಿಸಲಾಗಿತ್ತು. ಆ ನಂತರ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಹಳೆ ಪ್ರಕರಣದ ಆರೋಪಿಗಳ ಮೇಲೆ ನಿಗಾವಿರಿಸುವ ವಿಶೇಷ ಕರ್ತವ್ಯಕ್ಕೆ ಠಾಣಾ ಸಿಬ್ಬಂದಿಗಳಾದ ಇರ್ಷಾದ್ ಹಾಗೂ ಪ್ರತಾಪ್ ಅವರನ್ನು ನೇಮಿಸಲಾಗಿದ್ದು, ಅದರಂತೆ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ಆರೋಪಿ ಕೊಯಿಲ ನಿವಾಸಿ ಅಹಮ್ಮದ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್(26) ಅನುಮಾನಸ್ಪಾದವಾಗಿ ತಿರುಗಾಡುವುದನ್ನು ಕಂಡು ವಿಚಾರಣೆ ನಡೆಸಿದಾಗ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ದಿ. ಅಬ್ದುರ್ರಹ್ಮಾನ್ ಅವರ ಪುತ್ರ ಅನ್ವರ್ ಅಲಿ (29) ಯೊಂದಿಗೆ ಸೇರಿಕೊಂಡು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ತನಿಖೆಯು ಪ್ರಗತಿ ಕಾಣದೆ `ಸಿ’ ರಿಪೋರ್ಟ್ ಸಲ್ಲಿಸಲಾಗಿದ್ದ ಪ್ರಕರಣವೊಂದರ ಕಡತವನ್ನು ಮತ್ತೆ ತೆರೆದು, ಆರೋಪಿಗಳನ್ನು ಕಾನೂನಿನಡಿ ಎಳೆದು ತರುವಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜೀತ್ ಹಾಗೂ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಎಂ. ಅವರ ನಿರ್ದೇಶನದಂತೆ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ನಂದಕುಮಾರ್ ಹಾಗೂ ಸಿಬ್ಬಂದಿಗಳಾದ ಶಿವರಾಮ, ಧರ್ನಪ್ಪ, ಅಬ್ದುಲ್ ಸಲೀಂ, ಪ್ರತಾಪ್, ಇರ್ಷಾದ್ ಪಿ., ಜಗದೀಶ್, ಸಚಿನ್ ಕರ್ನಿರೆ, ಚಾಲಕರಾದ ರಾಜು ಬನ್ನೂರು, ನಾರಾಯಣ ಗೌಡ ದರ್ಬೆ ಅವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.