ಕಡಬ ನೂತನ ತಾಲೂಕು ಉದ್ಘಾಟನೆ ಮುಂದೂಡಿಕೆ ► ಕಾರಣವೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಆ.08. ಹಲವು ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಗೊಂಡು ಕೊನೆಯ ಕ್ಷಣದಲ್ಲಿ ರದ್ದಾಗುತ್ತಿದ್ದ ಕಡಬ ತಾಲೂಕು ಉದ್ಘಾಟನಾ ದಿನಾಂಕವು ಈ ಬಾರಿಯೂ ರದ್ದಾಗಿದ್ದು, ತಾಲೂಕಿನ ಬಗ್ಗೆ ಹಲವು ಕನಸನ್ನಿಟ್ಟುಕೊಂಡಿದ್ದ ಜನರನ್ನು ನಿರಾಸೆಗೊಳಿಸಿದೆ.

ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿದ್ದು, ಕೊನೆಗೂ ಕಡಬ ಪರಿಸರದ ಜನರ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯವರು ಜಂಟಿಯಾಗಿ ಹೇಳಿಕೆ ನೀಡಿದ್ದರು. ಆದರೆ ಕಡಬ ತಾಲೂಕು ಉದ್ಘಾಟನೆಯನ್ನು ಮುಂದೂಡಿರುವುದರಿಂದ ಉದ್ಘಾಟನೆಯ ಸಿದ್ಧತೆಯ ವಿಚಾರದಲ್ಲಿ ಆಗಸ್ಟ್ 10 ರಂದು ನಡೆಯಲಿದ್ದ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದೆ ಎಂದು ತಹಶಿಲ್ದಾರರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಕಡಬ ತಾಲೂಕು ಕೇಂದ್ರವಾಗಬೇಕೆಂಬ ಕಳೆದ ಹಲವು ದಶಕಗಳ ಬೇಡಿಕೆಯಂತೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರವು 43 ತಾಲೂಕುಗಳ ಜೊತೆಗೆ ಕಡಬವನ್ನೂ ನೂತನ ತಾಲೂಕಾಗಿ ಘೋಷಿಸಿತ್ತು. ತದನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿತ್ತು. ಆದರೆ ಉದ್ಘಾಟನಾ ಭಾಗ್ಯಕ್ಕೆ ಹಲವು ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದಾಗಿ ಕೊನೆಯ ಕ್ಷಣಗಳಲ್ಲಿ ರದ್ದಾಗುವ ಮೂಲಕ ನೂತನ ಕಡಬ ತಾಲೂಕಿನ ಕನಸು ಕನಸಾಗಿಯೇ ಉಳಿದಿತ್ತು. ಆದರೆ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲೂ ದಿನ ನಿಗದಿಗೊಂಡು ಕೊನೆಯ ಕ್ಷಣದಲ್ಲಿ ತಾಲೂಕು ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ತಾಲೂಕು ಹೋರಾಟಗಾರರನ್ನು ನಿರಾಶೆಗೊಳಿಸಿದೆ.

Also Read  ಜಿಲ್ಲಾಧ್ಯಕ್ಷರನ್ನು ಬಂಧಿಸಿ ಅವಮಾನ ➤ ಪೊಲೀಸ್ ಅಧಿಕಾರಿ ವಿರುದ್ಧ SDPI ಪ್ರತಿಭಟನೆ

error: Content is protected !!
Scroll to Top