ರಸ್ತೆಯಲ್ಲಿ ಕೋಳಿತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ► ಆಲಂಕಾರು ಗ್ರಾಮ ಸಭೆಯಲ್ಲಿ ಆಗ್ರಹ

ಕಡಬ: ಕೋಳಿತ್ಯಾಜ್ಯ ರಸ್ತೆಯಲ್ಲಿಯೇ ಎಸೆಯಲಾಗುತ್ತಿದ್ದು ಗ್ರಾಮ ಪಂಚಾಯಿತಿಯಿಂದ ಸ್ವಚ್ಚತೆಗೆ ಹೆಚ್ಚು ಒತ್ತುಕೊಡಬೇಕೆಂದು ಆಲಂಕಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಭೆ ಗ್ರಾ.ಪಂ.ಅಧ್ಯಕ್ಷೆ ಸುನಂದ ಬಾರ್ಕುಳಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್.ರವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ನೆಕ್ಕಿಲಾಡಿಯಲ್ಲಿ ಕೋಳಿತ್ಯಾಜ್ಯ ರಸ್ತೆಯಲ್ಲಿಯೇ ಎಸೆಯಲಾಗುತ್ತಿದೆ. ಸ್ವಚ್ಚತೆಗೆ ಆದ್ಯತೆ ಕೊಟ್ಟು ಕೋಳಿತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಜನಾರ್ದನ ಗೌಡ ಕಯ್ಯಪೆ ಆಗ್ರಹಿಸಿದರು.

ಸ್ವಚ್ಚತೆ ಬಗ್ಗೆ ಗ್ರಾ.ಪಂ.ನಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಯಾನಂದ ಗೌಡ ಬಡ್ಡಮೆ ಹಾಗೂ ಇತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಜಗನ್ನಾಥ ಶೆಟ್ಟಿಯವರು, ಸ್ವಚ್ಚತೆ ನಿಟ್ಟಿನಲ್ಲಿ ಗ್ರಾ.ಪಂ.ನಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಂಗಡಿ ಮಾಲಕರಿಗೆ ಹಾಗೂ ಕೋಳಿ ಮಾರಾಟಗಾರರಿಗೆ ಸ್ವಚ್ಚತೆಗೆ ಬಗ್ಗೆ ನೋಟಿಸ್ ನೀಡಲಾಗಿದೆ. ಕೋಳಿಮಾರಾಟಗಾರರು ಕೋಳಿತ್ಯಾಜ್ಯವನ್ನು ತಾವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಅಂಗಡಿ ಮಾಲೀಕರಿಗೆ ತ್ಯಾಜ್ಯ ಬೇರ್ಪಡಿಸಿಕೊಡಬೇಕೆಂದು ಸೂಚಿಸಿದ್ದರು ಕ್ರಮ ಕೈಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಸಹಕಾರ ಬೇಕೆಂದು ಹೇಳಿದರು. ಸಾರ್ವಜನಿಕ ಶೌಚಾಲಯ ಬ್ಲಾಕ್ ಆಗಿರುವ ಬಗ್ಗೆಯೂ ಗ್ರಾಮಸ್ಥರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒರವರು, ಮಳೆ ಬಿಟ್ಟ ನಂತರ ಸೆಕ್ಕಿಂಗ್ ಯಂತ್ರ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮೀನು ಮಾರುಕಟ್ಟೆ ವಿಚಾರ ಚರ್ಚೆ: ಆಲಂಕಾರಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯಿದ್ದರೂ ಏಲಂಗೆ ಪಡೆದುಕೊಂಡವರು ಆಲಂಕಾರು ಪೇಟೆಯಲ್ಲಿ ವಾಹನದಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. ಈಗ ಮೀನು ಮಾರುಕಟ್ಟೆ ನಾಯಿ,ಆಡುಗಳಿಗೆ ತಾಣವಾಗಿದೆ. ಪೇಟೆಯಲ್ಲಿ ಮೀನು ಮಾರಾಟದಿಂದ ಸ್ವಚ್ಚತೆಯೂ ಆಗುತ್ತಿಲ್ಲ ಎಂದು ಜನಾರ್ದನ ಗೌಡ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಾಧ್ಯಕ್ಷ ಸುಧಾಕರ ಪೂಜಾರಿಯವರು, ಮೀನು ಮಾರುಕಟ್ಟೆಯು 2014ರಲ್ಲಿ 5.20 ಲಕ್ಷ ರೂ.ಗೆ ಏಲಂ ಆಗಿದೆ. ಆದರೆ ಆಲಂಕಾರು ಪೇಟೆಯ ಬದಿಯಲ್ಲಿಯೇ ಪೆರಾಬೆ ಗ್ರಾ.ಪಂ.ಜಾಗದಲ್ಲಿ ಮತ್ತೊಂದು ಮೀನುಮಾರುಕಟ್ಟೆ ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದ ಏಲಂಗೆ ಪಡೆದುಕೊಂಡವರಿಗೆ ನಷ್ಟವಾಗಬಾರದೆಂದು ಗ್ರಾ.ಪಂ.ಆಡಳಿತ ಮಂಡಳಿ ನಿರ್ಣಯ ಕೈಗೊಂಡು ಪೇಟೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸ್ವಚ್ಚತೆ ಕಾಪಾಡುವಂತೆ ಅವರಿಗೆ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಅವರು ಗಲೀಜು ನೀರನ್ನು ಚರಂಡಿಗೆ ಬಿಡುತ್ತಿಲ್ಲ. ಬಕೆಟ್‍ವೊಂದರಲ್ಲಿ ತುಂಬಿಸಿಕೊಂಡು ಸೂಕ್ತ ವಿಲೇವಾರಿ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

Also Read  ಕಾಪು: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ವ್ಯಕ್ತಿ ಮೃತ್ಯು

ಎಲ್ಲರಿಗೂ ಬಸ್‍ಪಾಸ್ ಕೊಡಿ: ಶಾಲಾ, ಕಾಲೇಜು ಆರಂಭಗೊಂಡು 2 ತಿಂಗಳು ಕಳೆದಿದೆ. ಆದರೆ ಯಾರಿಗೂ ಬಸ್‍ಪಾಸ್ ಕೊಟ್ಟಿಲ್ಲ. ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸರಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಕೊಡಬೇಕೆಂದು ಜನಾರ್ದನ ಕಯ್ಯಪೆ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಆಲಂಕಾರಿನಲ್ಲಿ ಉದ್ದೇಶಿತ 110 ಕೆ.ವಿ.ಸಬ್‍ಸ್ಟೇಷನ್ ಶೀಘ್ರ ಅನುಷ್ಠಾನಿಸಿ, ರಾಜ್ಯ ಸರಕಾರ ಸುಸ್ಥಿ ಸಾಲ ಮಾತ್ರ ಮನ್ನಾ ಮಾಡಿರುವುದರಿಂದ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗಿದೆ. ಮುಂದೆ ಇಂತಹ ರೈತರು ಸಾಲ ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿರುವ ರೈತರಿಗೂ ಸಾಲಮನ್ನಾ ಯೋಜನೆ ಸಿಗಬೇಕು, ಕೊೈಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಪ್ರಭಾರ ವೈದ್ಯಾಧಿಕಾರಿಯಾಗಿರುವ ಕಡಬ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿಯವರು ವಾರದಲ್ಲಿ 3 ದಿನ ಮಾತ್ರ ಇರುತ್ತಾರೆ. ಆದ್ದರಿಂದ ಇಲ್ಲಿಗೆ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬಕು, ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯಕಾರ್ಡ್ ಪಡೆಯಲು ಕುಟುಂಬದ ಎಲ್ಲಾ ಸದಸ್ಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ತಂಬ್ ನೀಡಿ ನೋಂದಾವಣೆ ಮಾಡಬೇಕಾಗಿದೆ. ಜಿಲ್ಲೆಯ ಎಲ್ಲರೂ ಅಲ್ಲಿಗೆ ಬರುವುದರಿಂದ ಕಾರ್ಡ್ ಪಡೆಯಲು ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ಪಡೆಯಲು ವ್ಯವಸ್ಥೆ ಮಾಡಬೇಕು ಎನ್ನುವ ಮೊದಲಾದ ಆಗ್ರಹ, ಆರೋಪಗಳು ಸಭೆಯಲ್ಲಿ ವ್ಯಕ್ತವಾಯಿತು.

Also Read  ಜುಲೈ 13 ರಂದು ಮೂರನೇ ರೊಜ್ ಗಾರ್ ಮೇಳ

ಮನೋಹರ, ಶಿವಣ್ಣ ಗೌಡ ಕಕ್ವೆ, ಪಿಂಟೋ, ಅಬೂಬಕ್ಕರ್ ನೆಕ್ಕರೆ, ಪುರಂದರ ನಗ್ರಿ, ದಿನಶ್ ಪಜ್ಜಡ್ಕ, ದಿನೇಶ್ ಗಾಣಂತಿ, ಪದ್ಮನಾಭ ವಿವಿದ ಚರ್ಚೆಯಲ್ಲಿ ಭಾಗವಹಿಸಿದರು. ವಿವಿದ ಇಲಾಖಾಧಿಕಾರಿಳು ಇಲಾಖಾವಾರು ಮಾಹಿತಿ ನೀಡಿದರು. ತಾ.ಪಂ.ಸದಸ್ಯೆ ತಾರಾಕೇಪುಳು ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾ.ಪಂ.ಸದಸ್ಯರುಗಳಾದ ಕೇಶವ ಗೌಡ, ಇಂದುಶೇಖರ ಶೆಟ್ಟಿ, ಪುಷ್ಪಾ, ಸುನಂದ ಶರವೂರು, ಕೊರಗಪ್ಪ ಪಾಂಜೋಡಿ, ಭವಾನಿ ನಡುಗುಡ್ಡೆ, ನಾಗವೇಣಿ ಪಜ್ಜಡ್ಕ, ರೇವತಿ ನಡುಗುಡ್ಡೆ, ಸದಾನಂದ ಆಚಾರ್ಯ ಉಪಸ್ಥಿತರಿದ್ದರು. ಪಿಡಿಒ ಜಗನ್ನಾಥ ಶೆಟ್ಟಿ ಸ್ವಾಗತಿಸಿ ವರದಿ ಮಂಡಿಸಿದರು.

error: Content is protected !!
Scroll to Top