(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.05. ಇಲ್ಲಿನ ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಸಂಘದ ಆಶ್ರಯದಲ್ಲಿ ಆಟಿದ ಪೊರ್ಲ್ ಕಾರ್ಯಕ್ರಮವು ಶನಿವಾರದಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮೂಡಂಬೈಲ್ ರವಿ ಶೆಟ್ಟಿ ಮಾತನಾಡಿ, ಏಮ್ಸ್ ಪ್ರಥಮ ದರ್ಜೆ ಕಾಲೇಜು ಮತ್ತು ಎ.ಎಂ.ಎಸ್. ವಿದ್ಯಾಸಂಸ್ಥೆಯ ಧ್ಯೇಯವಾಕ್ಯದಂತೆ ಜಾತ್ಯತೀತ ಆಧಾರಿತ ಮತ್ತು ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸುಂದರವಾದ ಕನಸು ನನಸಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೆಗ್ ರ್ ತುಳುಕೂಟದ ಸಂಚಾಲಕರಾದ ಉಮೇಶ್ ಶೆಟ್ಟಿ ಸಾಯಿರಾಮ್ ವಿದ್ಯಾರ್ಥಿಗಳಿಗೆ ತುಳುನಾಡಿನ ಆಟಿಯ ವಿಶೇಷತೆ ಮತ್ತು ಆಚರಣೆಯ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು. ವಿಶೇಷ ಅತಿಥಿಯಾಗಿ ಸೀನಿಯರ್ ಫೈನಾನ್ಷಿಯಲ್ ಕಂಟ್ರೋಲರ್ ಅಬ್ದುಲ್ಲಾ ಮದುಮೂಲೆ ಭಾಗವಹಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ಮರಿಯಂ ಫೌಝಿಯ ಬಿ.ಎಸ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಏಮ್ಸ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಪ್ರಸಾದ್ ಕೆದಿಲಾಯ ಭಟ್ ರವರು ಆಟಿಯ ವಿಶೇಷತೆ ಮತ್ತು ವಿದ್ಯೆಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಅದನ್ನು ನೋಡುವಲ್ಲಿ ಏಮ್ಸ್ ಅವಿರತ ಶ್ರಮ ಅಮೋಘವಾದದ್ದು ಈ ವಿದ್ಯಾಸಂಸ್ಥೆಯ ಆಶಯ ಉದ್ದೇಶ ಬಹಳ ಅರ್ಥಪೂರ್ಣವಾಗಿದೆ. ಈ ಸದುದ್ದೇಶಕ್ಕೆ ನಾವೆಲ್ಲರೂ ಕೈ ಜೋಡಿಸಬೇಕೆಂದು ನುಡಿದರು. ರೋಟರಿ ಕ್ಲಬ್ ಕಡಬದ ಕಾರ್ಯದರ್ಶಿ ರಫೀಕ್, ಮಲ್ನಾಡ್ ರಬ್ಬರ್ ಮಾಲೀಕ ಜೇಕಬ್ ಕಳಾರ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀ ಲೋಕಯ್ಯ ಶಿಶಿಲ ಆಟಿಯ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀ ಮೂಡಂಬೈಲ್ ರವಿ ಶೆಟ್ಟಿ ಮತ್ತು ಅಬ್ದುಲ್ಲಾ ಮದುಮೂಲೆಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಸೆಮೀರಾ ಕೆ.ಎ ಮತ್ತು ತುಳು ಸಂಘದ ಸಂಯೋಜಕರಾದ ಅಬ್ದುಲ್ ಸಮೀರ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ತುಳುನಾಡಿನ ಆಟಿ ತಿಂಗಳಿನಲ್ಲಿ ತಯಾರಿಸುವ ವಿವಿಧ ತಿಂಡಿ ತಿನಿಸುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಅಭಿಲಾಷ್ ಸ್ವಾಗತಿಸಿ, ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕು| ಶಬಾನ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಅನೀಷಾ ಕಾರ್ಯಕ್ರಮ ನಿರೂಪಿಸಿದರು.