ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಹಿತ್ಯದಿಂದ ಸಾಧ್ಯ: ಜಯಂತ್ ಕಾಯ್ಕಿಣಿ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಆ.01. ಗಾಂಭೀರ್ಯ ಜಗತ್ತು ಮತ್ತು ನಮ್ಮ ಮಧ್ಯೆ ಅಡ್ಡಗೋಡೆ ನಿರ್ಮಾಣವಾದರೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಿಲ್ಲ, ಆದರೆ ಸಾಹಿತ್ಯದಿಂದ ಇಡೀ ಜಗತ್ತನ್ನು ಪ್ರೀತಿಯಿಂದ ನೋಡಲು ಸಾಧ್ಯ ಎಂದು ಖ್ಯಾತ ಸಾಹಿತಿ, ಕಥೆಗಾರ ಜಯಂತ್ ಕಾಯ್ಕಿಣಿ ಹೇಳಿದರು.

ಅವರು ಸೋಮವಾರ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬದುಕಿನಲ್ಲಿ ನೋವು ನಲಿವುಗಳು ಸಾಹಿತ್ಯಕ್ಕೆ ಪ್ರೇರಣೆ ನೀಡುತ್ತವೆ, ಬದುಕಿನಲ್ಲಿ ಅದಮ್ಯ ಪ್ರೀತಿಯಿದ್ದರೆ ಸಾಹಿತ್ಯ ಸಂಭ್ರಮ ಅಲ್ಲಿ ನವಿರಾಗಿ ಕಾಣುತ್ತದೆ, ಬದಕಿನಲ್ಲಿನ ಕುತೂಹಲ, ಆಸಕ್ತಿ, ಅನುಭವ ಕೂಡಾ ಕಥೆ ಕವನಗಳಿಗೆ ಆಸ್ಪದ ನೀಡುತ್ತದೆ, ಮನಸ್ಸಿನ ಕನಸ್ಸಿನ ಜಾಗದಿಂದ ಸಾಹಿತ್ಯ ಮೂಡಿ ಬಂದು ಹೊಸ ಹೊಸ ರೂಪ ಪಡೆದು ಬದುಕಿನ ಕುರಿತು ನಾನಾ ಕಿಟಕಿಗಳನ್ನು ತೆರೆದುಕೊಳ್ಳುತ್ತದೆ, ನಮ್ಮ ಮನಸ್ಸಿನಲ್ಲಿ ಇಂದು ಫೇಸ್ ಬುಕ್ ವಾಟ್ಸಾಪ್‍ನಂತಹ ಕಸ ತುಂಬಿಕೊಂಡಿವೆ, ಇದರಲ್ಲಿ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡು ಮಾನವೀಯ ಸಂಬಂಧಗಳಿಗೆ ಎಳ್ಳು ನೀರು ಬಿಡುತ್ತಿರುತ್ತೇವೆ, ಇದನ್ನೆಲ್ಲಾ ಸರಿದೂಗಿಸಲು ಸಾಹಿತ್ಯ ಬೇಕೇ ಬೇಕು, ಪ್ರೀತಿ, ಮಮತೆ, ಸಮತೆ ಹಾಗೂ ಹೃದಯ ಶ್ರೀಮಂತಿಕೆಯಿಂದ ಜಗತ್ತನ್ನು ಒಳಗಣ್ಣಿನಿಂದ ನೋಡಿದರೆ ಎಲ್ಲವೂ ಸಂತೋಷಮಯವಾಗಿರುತ್ತದೆ, ಭಾಷೆ ಮತ್ತು ಜನರ ಮಧ್ಯೆ ಬೆರೆತು ಸಾಹಿತ್ಯ ಕೃಷಿ ಮಾಡಿದರೆ ತಮ್ಮೊಳಗಿನ ಅದ್ಭುತ ಸಾಹಿತ್ಯ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದ ಕಾಯ್ಕಿಣಿ ನಾವು ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಇಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕು, ಸಾಹಿತಿ ಎನ್ನುವುದು ಯಾರಿಗೂ ಬ್ರಾಂಡ್ ಅಲ್ಲ, ನಾವು ನಮ್ಮ ಬದುಕಿನ ಸುತ್ತ ಇರುವ ಘಟನೆ ಹಾಗೂ ಸೊತ್ತುಗಳ ಬಗ್ಗೆ ಬರೆಯುವುದರಲ್ಲಿ ಪದ್ಯ ಕಥೆಗಳುÉ ಹುಟ್ಟಿಕೊಳ್ಳುತ್ತವೆ, ಓದುವ ಅಭ್ಯಾಸವನ್ನು ಹೆಚ್ಚು ಮಾಡಿಕೊಂಡು ಹೊದ ರೀತಿಯಲ್ಲಿ ಯುವ ಸಾಹಿತಿಗಳು ಆಲೋಚನೆ ಮಾಡಿ ಬದುಕಿನಲ್ಲಿ ನಿತ್ಯ ಕಾಣುವ ವಿಚಾರಗಳನ್ನು ಕಾವ್ಯವಾಗಿ ಪರಿವರ್ತಿಸಬಹುದು ಎಂದರು. ನಾವು ಬದುಕನ್ನು ದೈನಂದಿನ ಧಾರಾವಾಹಿಯಾಗಿ ನಿಗದಿಪಡಿಸಬಾರದು ಬದುಕಿನ ಪ್ರತೀ ಹಂತದಲ್ಲೂ ಸಾಧನೆಗೆ ಅವಕಾಶವಿದೆ, ಅದನ್ನು ಸದುಪಯೋಗಪಡಿಸಿ ಕೊಳ್ಳವುದು ಜಾಣತನ ಎಂದು ಹೇಳಿದ ಕಾಯ್ಕಿಯವರು ದೃಶ್ಯ ಮಾಧ್ಯಮದಲ್ಲಿ ಬರುವ ಬಹುತೇಕ ಕಾರ್ಯಕ್ರಮಗಳು ಆರ್ಥಿಕತೆ ದೃಷ್ಠಿಯಿಂದಲೇ ಮಾಡಲಾಗುತ್ತಿದೆ, ಜನರಿಗೆ ಬೇಕಾಗುವ ವಿಚಾರಗಳನ್ನು ನಾವು ಅದರಲ್ಲಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ ಅವರು ಚಿತ್ರ ಸಾಹಿತ್ಯವನ್ನು ನಾವು ಮಾಡಿದರೂ ಅದನ್ನು ಅಪಭ್ರಂಶ ಮಾಡಲಾಗುತ್ತಿದೆ, ಇದರಿಂದ ಮೂಲ ವಿಚಾರಕ್ಕೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Also Read  ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ➤ ಪ್ರಕರಣ ದಾಖಲು

ಗಮಕ ಸಾಹಿತಿ ಪ್ರೊ. ಮಧೂರು ಮೋಹನ ಕಲ್ಲೂರಾಯ ಸಭೆಯ ಅಧ್ಯಕ್ಷತೆವಹಿಸಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣ ಮೂರ್ತಿ ಕಲ್ಲೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕ ಗಿರೀಶ್ ಕಾಯ್ಕಿಣಿ ಯವರ ಕವಿತೆಯನ್ನು ಹಾಡಿದರು. ವಿದ್ಯಾರ್ಥಿಗಳಾದ ರಶ್ಮಿ, ತಿಲಕ್ ರಾಜ್, ಚೇತನಾ, ಅನ್ವಿತಾ, ಜಯಶ್ರೀ ಸ್ವರಚಿತ ಕವನ ವಾಚನ ಮಾಡಿದರೆ, ಪ್ರತಿಕ್ಷಾ, ಸುಮತಿ, ಪ್ರಕೃತಿ ತಾವು ಬರೆದ ಸಣ್ಣ ಕಥೆಗಳನ್ನು ಓದಿದರು. ಆಶಯ ಗೀತೆಯನ್ನು ಕೂಡಾ ಕಾಯ್ಕಿಣಿಯವರ ಕವಿತೆಯನ್ನು ಹಾಡಲಾಯಿತು. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ರಾಮಕುಂಜೆಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಕಾಯ್ಕಿಣಿಯವರ ಪರಿಚಯ ಮಾಡಿ ಸ್ವಾಗತಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ್ ವಂದಿಸಿದರು. ಉಪನ್ಯಾಸಕ ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ

error: Content is protected !!
Scroll to Top