(ನ್ಯೂಸ್ ಕಡಬ) newskadaba.com ಕಡಬ, ಜು.18. ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮ ಸಭೆಯು ಕಲ್ಲುಗುಡ್ಡೆಯಲ್ಲಿ ನೂತನವಾಗಿ ಆರಂಭವಾಗಲಿರುವ ಮದ್ಯದಂಗಡಿ ವಿರೋಧಿಸಿ ಹಲವು ಗದ್ದಲದ ನಡುವೆ ಮಂಗಳವಾರದಂದು ನೂಜಿಬಾಳ್ತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹೆದ್ದಾರಿ ಬದಿಯಲ್ಲಿನ ಬಾರ್ ಗಳನ್ನು ಮುಚ್ಚಬೇಕೆನ್ನುವ ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿನ ಬಾರನ್ನು ಕಲ್ಲುಗುಡ್ಡೆಗೆ ವರ್ಗಾಯಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಗ್ರಾಮಸ್ಥರ ವಿರೋಧ ಇರುವುದರಿಂದ ನಾವು ಕೂಡ ಗ್ರಾಮಸ್ಥರ ಜತೆಗೆ ಇರುತ್ತೇವೆ. ಗ್ರಾಮಸ್ಥರ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ ಎಂದರು.
ಅಲ್ಲದೆ ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಗ್ರಾಮಸ್ಥರ ವಿರೋಧವಿದೆಯೆಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮ ಸಭೆಯಲ್ಲಿ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್ ಭಾಗವಹಿಸದೆ ಇರುವುದಕ್ಕೆ ಸುಂದರಿ ಎಂಬವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು. ಸಭೆಯಲ್ಲಿ
ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ಪ್ರಾರಂಭವಾದರೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಕಾರಣಕ್ಕೂ ಮದ್ಯದಂಗಡಿ ತೆರೆಯುವುದಕ್ಕೆ ಬಿಡಬಾರದು ಎಂದು ಶಾಲಾ ವಿದ್ಯಾರ್ಥಿ ನಾಯಕಿಯಾದ ದೀಪ್ತಿ ಎಂಬಾಕೆ ಗ್ರಾ.ಪಂ. ಅಧ್ಯಕ್ಷರ ಮೂಲಕ ಜಿ.ಪಂ. ಸದಸ್ಯರಿಗೆ ಮನವಿ ಸಲ್ಲಿಸಿದರು.