(ನ್ಯೂಸ್ ಕಡಬ) newskadaba.com ಮಂಗಳೂರು, ಜು.30. ಪರಿಚಯದ ಮಹಿಳೆಯ ಜೊತೆಗೆ ಮಾತನಾಡಿದ ಕಾರಣಕ್ಕಾಗಿ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಫರಂಗಿಪೇಟೆಯಲ್ಲಿ ಭಾನುವಾರದಂದು ನಡೆದಿದೆ.
ಉಡುಪಿಯ ಕೋಟ ನಿವಾಸಿ ಸುರೇಶ್ ಎಂಬವರು ತನ್ನ ಕಾರಿನಲ್ಲಿ ಕೆಲಸದ ನಿಮಿತ್ತ ಬಂಟ್ವಾಳದಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಫರಂಗಿಪೇಟೆ ಬಸ್ ನಿಲ್ದಾಣದ ಬಳಿ ಪರಿಚಯದ ಮಹಿಳೆಯೊಬ್ಬರನ್ನು ನೋಡಿ ಕಾರು ನಿಲ್ಲಿಸಿ ಮಾತನಾಡಿ ಅಲ್ಲಿಂದ ಹೊರಡುವಾಗ ಸುಮಾರು 8 ರಿಂದ 10 ಜನ ಯುವಕರ ತಂಡವು ಕಾರನ್ನು ಅಡ್ಡಗಟ್ಟಿ ಸುರೇಶ್ ರವರಿಗೆ ಅವಾಚ್ಯ ಶಬ್ದಗಳಿಂದ ಬಯ್ದು, ಕೈಯಿಂದ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಸೇರಿದ್ದ ಗುಂಪನ್ನು ಚದುರಿಸಿ ಸುರೇಶ್ ರವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ಈ ಬಗ್ಗೆ ಸುರೇಶ್ ರವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ರಿ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯಿದ್ದು ಶೀಘ್ರವಾಗಿ ಅವರನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.