(ನ್ಯೂಸ್ ಕಡಬ) newskadaba.com ಮಂಗಳೂರು, ಜು.17.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯಲು ಯತ್ನಿಸುತ್ತಿದೆ. ಅವರಿಗೆ ಓಟಿನ ಚಿಂತನೆಯಾದರೆ ಜನರಿಗೆ ಬದುಕಿನ ಚಿಂತೆ ಉಂಟಾಗಿದೆ. ಜನರನ್ನು ಸಮಾಧಾನ ಮತ್ತು ಸೌಹಾರ್ದತೆಯಿಂದ ಬದುಕಲು ಬಿಡಿ ಎಂದು ಸುನ್ನೀ ನಾಯಕ ಎಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ವಿನಂತಿಸಿದ್ದಾರೆ.
ಅವರು ಸೋಮವಾರದಂದು ಮಂಗಳೂರಿನಲ್ಲಿ ಕರ್ನಾಟಕ ಸುನ್ನೀ ಉಲೆಮಾಗಳ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂ ಮುಸ್ಲಿಮ್ ಕ್ರೈಸ್ತರು ಇಂದಿಗೂ ಸಹೋದರತೆಯಿಂದ ಬದುಕುತ್ತಿದ್ದಾರೆ. ಪ್ರತಿಯೊಬ್ಬರೂ ಶಾಂತಿಯನ್ನು ಬಯಸುತ್ತಿದ್ದಾರೆ. ಮತ ಗಳಿಸಲು ಸಮಾಜದ ಹಿತವನ್ನು ಬಲಿ ಕೊಡುವುದು ಸರಿಯಲ್ಲ. ಮನುಷ್ಯರನ್ನು ಕೊಂದು ತಿಂದರೆ ಮತ ಹಾಕಲು ಜನರು ಬೇಕಲ್ಲವೇ ಎಂದು ಇಂದಿನ ರಾಜಕೀಯ ಪರಿಸ್ಥಿತಿಗೆ ಬೇಸತ್ತು ತನ್ನ ನೋವು ವ್ಯಕ್ತಪಡಿಸಿದರು.
ಪ್ರತೀಯೊಬ್ಬನೂ ಈ ದೇಶದ ಅವಿಭಾಜ್ಯ ಅಂಗ. ಪ್ರತೀಯೊಬ್ಬರಿಗೂ ಬದುಕುವ ಅವಕಾಶವಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಇಲ್ಲಿ ದೇಗುಲ, ಮಸೀದಿ, ಚರ್ಚುಗಳು ಇವೆ. ಅಲ್ಲಿ ಪ್ರತೀಯೊಬ್ಬರೂ ತಮ್ಮ ವಿಶ್ವಾಸದಲ್ಲಿ ಧರ್ಮವನ್ನು ಪಾಲಿಸುತ್ತಾರೆ. ಮಾನವ ಸೌಹಾರ್ದತೆ ಇಲ್ಲದ ಸಮಾಜದಲ್ಲಿ ಧರ್ಮಗಳು ಮೌಲ್ಯ ಕಳೆದುಕೊಳ್ಳುತ್ತದೆ. ನಾವು ಪ್ರೀತಿ ಸಹಕಾರ ಮತ್ತು ಸೌಹಾರ್ದತೆಯಿಂದ ಬದುಕಿದರೆ ಎಲ್ಲರಿಗೂ ಒಳಿತಾಗಲಿದೆ ಎಂದ ಎಪಿ ಉಸ್ತಾದರು ನಾವು ಈ ಮೊದಲು ಕರ್ನಾಟಕ ಯಾತ್ರೆ ಮಾಡಿರುವುದು ಅದೇ ಉದ್ದೇಶದಿಂದ. ಆ ಯಾತ್ರೆಯಲ್ಲಿ ಹಿಂದೂ ಸ್ವಾಮೀಜಿಗಳು, ಬಿಷಪರು ಭಾಗವಹಿಸಿದ್ದರು. ನಾವು ಒಳಿತು ಉಂಟಾಗುವ ಕಾರ್ಯವನ್ನು ಮಾಡುತ್ತಲೇ ಇರುತ್ತೇವೆ ಎಂದರು.
ಇಸ್ಲಾಮ್ ಧರ್ಮವನ್ನು ಅಧ್ಯಯನ ಮಾಡಿ ನೋಡಿ. ಅದು ಶಾಂತಿ ಮತ್ತು ಮನುಷ್ಯ ಜೀವನದ ಮಹತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ. ಯಾವ ವ್ಯಕ್ತಿಯನ್ನು ಕೊಲ್ಲಲು ಅಥವಾ ನೋಯಿಸಲು ಅದು ಅವಕಾಶ ನೀಡಿಲ್ಲ. ಅಂತವರು ಧರ್ಮದ ವ್ಯಕ್ತಿಗಳಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದೂ ಸಮಾಜಘಾತುಕ ಶಕ್ತಿಗಳು ಇಲ್ಲಿ ವಿಜ್ರಂಭಿಸುತ್ತಿದ್ದಾರೆ. ಇದು ಕೇವಲ ರಾಜಕೀಯ ಲಾಭ ಮತ್ತು ಹಿತಕಾಯುವ ಅಕ್ರಮವಾಗಿದೆ. ಇದನ್ನು ನಾವೆಲ್ಲರೂ ಜೊತೆ ಸೇರಿ ವಿಫಲಗೊಳಿಸಬೇಕು ಎಂದು ಉಸ್ತಾದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಖಾಝಿ ಬೇಕಲ ಉಸ್ತಾದ್,ಮಾಣಿ ದಾರುಲ್ ಇರ್ಶಾದ್ ನ ಹಮೀದ್ ಮುಸ್ಲಿಯಾರ್,ಅಲ್ ಮದೀನಾ ಎಜುಕೇಶನ್ ಟ್ರಸ್ಟ್ ನ ಅಬ್ಬಾಸ್ ಮುಸ್ಲಿಯಾರ್,ಎಸ್.ಎಸ್.ಎಫ್ ನ ರಾಜ್ಯಾಧ್ಯಕ್ಷರಾದ ಇಸ್ಲಾಯಿಲ್ ಸಖಾಫಿ, ಕೆಸಿಎಫ್ ಇದರ ಅಧ್ಯಕ್ಷರಾದ ಶಾಫಿ ಸಹದಿ.ಕುಂಬ್ರ ಮರ್ಕಝ್ ನ ಪ್ರಧಾನ ಕಾರ್ಯದರ್ಶಿಯಾದ ಝೈನಿ ಉಸ್ತಾದ್, ಅಲ್ ಅನ್ಸಾರ್ ಇದರ ಹಂಝ ಸಖಾಫಿ ಸೇರಿದಂತೆ ಪ್ರಮುಖ ಉಲೆಮಾಗಳು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿಯಾದ ಮಮ್ತಾಝ್ ಅಲಿ ಕೃಷ್ಣಾಪುರ ಉಪಸ್ಥಿತರಿದ್ದರು.