(ನ್ಯೂಸ್ ಕಡಬ) newskadaba.com ಆಲಂಕಾರು, ಜು.29. ಪೆರಾಬೆ ಗ್ರಾಮದ ಸುರುಳಿ ಎಂಬಲ್ಲಿ ಕಳೆದ 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಿರು ಸೇತುವೆ ಇದೀಗ ಕುಸಿತ ಭೀತಿಯನ್ನು ಎದುರಿಸುತ್ತಿದೆ.
ಮೈಸೂರು _ಧರ್ಮಸ್ಥಳ ರಸ್ತೆಯ ಸಂಪರ್ಕ ರಸ್ತೆಯಲ್ಲಿ ಈ ಕಿರು ಸೇತುವೆ ಬರುತ್ತಿದ್ದು, ಆಲಂಕಾರು ನೆಲ್ಯಾಡಿ ಸಂಪರ್ಕದ ಪ್ರಮುಖ ರಸ್ತೆ ಇದಾಗಿರುತ್ತದೆ. ಆಲಂಕಾರಿನಿಂದ ಎರಡು ಕಿ.ಮೀ ದೂರದಲ್ಲಿರುವ ಈ ಕಿರು ಸೇತುವೆ ಕುಸಿದು ಬಿದ್ದಲ್ಲಿ ನೆಲ್ಯಾಡಿ, ಸುರುಳಿ, ಮಾಪಲ, ಕೆಮ್ಮಿಂಜೆ, ಮೊದಲಾದ ಪ್ರಮುಖ ಸ್ಥಳಗಳ ಸಂಪರ್ಕವನ್ನು ಕಳೆದುಕೊಳ್ಳಲಿದೆ.
ಈಗಾಗಲೇ ಸೇತುವೆಯ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು ಒಳಗಿನ ಕಬ್ಬಿಣದ ರಾಡ್‍ಗಳು ತುಕ್ಕು ಹಿಡಿದು ಹೊರ ಜಗತ್ತನ್ನು ನೋಡುತ್ತಿವೆ. ಅಲ್ಲದೆ ಒಂದು ಬದಿಯ ತಡೆಗೋಡೆಯು ವಾಲಿಕೊಂಡಿದೆ. ಸೇತುವೆಯ ಅಗಲವು ಬಹಳಷ್ಟು ಕಿರಿದಾಗಿದ್ದು ಏಕಕಾಲದಲ್ಲಿ ಎರಡು ವಾಹನಗಳಿಗೆ ಸಂಚಾರವು ಕಷ್ಟಕರವಾಗಿದೆ. ಒಂದು ವೇಳೆ ವಾಹನಗಳು ಬದಿಗೆ ಸರಿದಲ್ಲಿ ಅಪಾಯ ಇಲ್ಲಿ ಕಟ್ಟಿಟ್ಟ ಬುತ್ತಿಯಾಗಿದೆ. ಐದು ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯಡಿ ಆಲಂಕಾರಿನಿಂದ ಆರ್ಲದವರೆಗೆ ರಸ್ತೆ ದುರಸ್ತಿಗೊಳಿಸಿ ಮರುಡಾಮರೀಕರಣ ಮಾಡಲಾಗಿತ್ತು. ಆದರೆ ಆ ಸಮಯದಲ್ಲಿಯು ಸುರುಳಿ ಕಿರು ಸೇತುವೆಯನ್ನು ದುರಸ್ತಿ ಮಾಡುವ ಅಥವಾ ಸೇತುವೆ ಅಗಲೀಕರಣಗೊಳಿಸುವ ಕಾರ್ಯವನ್ನು ಮಾಡಲಿಲ್ಲ. ಇದರ ಪರಿಣಾಮ ಐದು ವರ್ಷದ ಹಿಂದೆ ಉಪ್ಪಿನಂಗಡಿಯಿಂದ ಆಲಂಕಾರಿನ ಮೂಲಕ ಬೆಳಿಗ್ಗೆ ಮತ್ತು ಸಂಜೆ ಸುರುಳಿಗಿದ್ದ ಸರಕಾರಿ ಬಸ್‍ನ ಸೇವೆಯನ್ನು ಕಿರು ಸೇತುವೆಯಲ್ಲಿ ಬಸ್ ಸಂಚಾರ ಕಷ್ಟಕರ ಎಂಬ ಕಾರಣ ನೀಡಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಇದೇ ಮಾದರಿ ಈ ರಸ್ತೆಯ ಮುಂದಕ್ಕೆ ಸಿಗುವ ಮಾಪಲ ಸಂಪರ್ಕ ಸೇತುವೆಯ ತೀರಾ ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ಆರೋಪಗಳಿವೆ.
ಈ ಸೇತುವೆಯು ತಿರುವಿನಲ್ಲಿಯೇ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪವು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಈ ಸೇತುವೆಯ ಸಂಪರ್ಕ ರಸ್ತೆಯ ಬಳಿ ಕುಸಿತ ಕಂಡು ಬಂದಿತ್ತು. ಬಳಿಕ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ದುರಸ್ತಿ ಮಾಡಲಾಗಿದ್ದು, 2013ನೇ ಸಾಲಿನಲ್ಲಿ ರಸ್ತೆ ಮರು ಡಾಮರೀಕರಣ ಮಾಡುವ ಸಮಯದಲ್ಲಿ ಮತ್ತೋಮ್ಮೆ ದುರಸ್ತಿ ಮಾಡುವುದರ ಮೂಲಕ ಸಮಸ್ಯೆಯನ್ನು ತಾತ್ಕಾಲಿಕ ಶಮನ ಮಾಡಲಾಗಿದೆ. ಅದೇ ಮಾದರಿ ಸುರುಳಿ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳಿವೆ. ಅಪಾಯ ಸಂಭವಿಸುವ ಮುನ್ನಾ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಾಗಿದೆ.