(ನ್ಯೂಸ್ ಕಡಬ) newskadaba.com ವಿಟ್ಲ, ಜು.27. ಅಶೋಕ್ ಲೈಲಾಂಡ್ ದೋಸ್ತ್ ವಾಹನದಲ್ಲಿ ಹಿಂಸಾತ್ಮಕವಾಗಿ 4 ದನಗಳು ಮತ್ತು ಒಂದು ಕರುವನ್ನು ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ವಿಟ್ಲ ಪೊಲೀಸರು ಭಜರಂಗದಳದ ಕಾರ್ಯಕರ್ತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಟ್ಲ ಪಡ್ನೂರು ಗ್ರಾಮ ಪಡಾರು ನಿವಾಸಿ ಕೃಷ್ಣ ಭಟ್ ಎಂಬವರ ಪುತ್ರ ಶಶಿ ಕುಮಾರ್(48) ಹಾಗೂ ಕೊಲ್ನಾಡು ಗ್ರಾಮದ ಮಣ್ಣಗದ್ದೆ ಕಟ್ಟತ್ತಿಲ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಬ್ದುಲ್ ಹಾರಿಸ್(21) ಎಂದು ಗುರುತಿಸಲಾಗಿದೆ. ಆರೋಪಿಗಳು ಅಶೋಕ್ ಲೈಲಾಂಡ್ ದೋಸ್ತ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕರಾದ ನಾಗರಾಜ್ ಹೆಚ್.ಇ. ಹಾಗೂ ಸಿಬ್ಬಂದಿಗಳು ವಿಟ್ಲ ಪಡ್ನೂರು ಗ್ರಾಮದ ಕಡಂಬು ಜಂಕ್ಷನ್ ನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಜಾನುವಾರು ಹಾಗು ವಾಹನದ ಅಂದಾಜು ಮೌಲ್ಯ 5 ಲಕ್ಷಗಳಾಗಿದ್ದು, ಜಾನುವಾರುಗಳನ್ನು ಸಾಗಾಣಿಕೆ ಮಾಡಲು ವಾಹನದ ಬಾಡಿಯನ್ನು ಎತ್ತರ ಮಾಡಿ ಯಾರಿಗೂ ಅನುಮಾನ ಬಾರದಂತೆ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.
ಬಂಧಿತ ಆರೋಪಿ ಶಶಿಕುಮಾರ್ ಎಂಬಾತನು ಭಜರಂಗದಳದ ಕಾರ್ಯಕರ್ತನಾಗಿದ್ದು, ಅಬ್ದುಲ್ ಹಾರಿಸ್ ಎಂಬಾತನು ಈ ಹಿಂದೆ ಅಳಿಕೆ ಎಂಬಲ್ಲಿ ದನ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿರುತ್ತಾನೆ. ಅಲ್ಲದೆ ಕೊಣಾಜೆ ಠಾಣೆಯಲ್ಲಿ ಕೂಡ ಈತನ ವಿರುದ್ದ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.