ಕೋಡಿಂಬಾಳದ ಮೂರಾಜೆ ಕೊಪ್ಪ ಶಾಲೆಯ ಛಾವಣಿ ಬಿರುಕು ► ಆತಂಕದಲ್ಲಿ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಜು.23. ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಕಂಡುಬಂದಿರುವ ಕಾರಣದಿಂದಾಗಿ ಶಾಲಾ ವಿದ್ಯಾರ್ಥಿಗಳು ಆತಂಕದಿಂದಲೇ ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳುವಂತಹ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.

ಸುಮಾರು 40 ವಿದ್ಯಾರ್ಥಿಗಳಿರುವ ಮೂರಾಜೆ ಕೊಪ್ಪ ಶಾಲೆ ಆರಂಭಗೊಂಡು ಕೇವಲ 15 ವರ್ಷಗಳಷ್ಟೇ ಆಗಿದೆ. ಸುಮಾರು 13 ವರ್ಷಗಳ ಹಿಂದೆ ಶಾಲೆಗೆ ಕಟ್ಟಡ ನಿರ್ಮಾಣಗೊಂಡಿದೆ. 2 ತರಗತಿ ಕೊಠಡಿಗಳು ಹಾಗೂ 1 ಕಚೇರಿ ಕೊಠಡಿ ಇರುವ ಈ ಕಟ್ಟಡದ 1 ತರಗತಿ  ಕೊಠಡಿಯ ಕಾಂಕ್ರೀಟ್ ಛಾವಣಿಯಲ್ಲಿ ಬಿರುಕು ಕಾಣಿಸಿಕೊಂಡು ಛಾವಣಿಗೆ ಹಾಕಿದ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಕಳಪೆ ಕಾಮಗಾರಿಯಿಂದಾಗಿ ಛಾವಣಿ ಬಾಗಿರುವುದರೊಂದಿಗೆ ಗೋಡೆಯೂ ಬಿರುಕುಬಿಟ್ಟು ಅಪಾಯವನ್ನು ಆಹ್ವಾನಿಸುವಂತಿದೆ.

ಶಾಲೆಯ ಕಟ್ಟಡ ಶಿಥಿಲಗೊಂಡಿರುವ ವಿಚಾರವನ್ನು ಜು.19 ರಂದು ಜರಗಿದ ಕಡಬ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿ ಸ್ಥಳೀಯ ಮುಂದಾಳು ಸುರೇಂದ್ರ ಅವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸದಂತೆ ಮುಂಜಾಗರೂಕತೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಶಿಕ್ಷಣ ಇಲಾಖಾ ಸಿಆರ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಆನಂದ ಮೂರ್ತಿ ತಿಳಿಸಿದ್ದಾರೆ.

Also Read  ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆ ➤ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಗೆ ಸಹಾಯಧನ

ಕಟ್ಟಡ ಬಿರುಕು ಬಿಟ್ಟಿರುವುದರಿಂದ ಪೋಷಕರು ಮಕ್ಕಳನ್ನು ಆತಂಕದಿಂದಲೇ ಶಾಲೆಗೆ ಕಳುಹಿಸುತ್ತಿದ್ದಾರೆ. ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಪೋಷಕರು ನಿರ್ಧರಿಸಿದ್ದಾರೆ. ಮಕ್ಕಳಿಲ್ಲದೆ ಅಲ್ಲಲ್ಲಿ ಸರಕಾರಿ ಶಾಲೆಗಳು ಮುಚ್ಚುಗಡೆಯಾಗುತ್ತಿರುವ ಸಮಯದಲ್ಲಿ ಮಕ್ಕಳಿದ್ದರೂ ಕಟ್ಟಡ ಸರಿ ಇಲ್ಲದೇ ಮೂರಾಜೆ ಶಾಲೆ ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದದ ಸಂಗತಿ.
-ರಮೇಶ್ ಅಡೀಲು, ಎಸ್ಡಿಎಂಸಿ ಮಾಜಿ ಅಧ್ಯಕ್ಷ

Also Read  ದೇವಸ್ಥಾನದ ಆವರಣದಲ್ಲಿದ್ದ ಮಹಿಳೆಯರ ಚಿನ್ನದ ಸರ ಕಳವು- ಪ್ರಕರಣ ದಾಖಲು

error: Content is protected !!
Scroll to Top