(ನ್ಯೂಸ್ ಕಡಬ) newskadaba.com ಕಡಬ, ಜು.22. ಕೋಡಿಂಬಾಳ ಗ್ರಾಮದ ಅರ್ಪಾಜೆ ಎಂಬಲ್ಲಿರುವ ಕೆರೆಯನ್ನು ಒತ್ತುವರಿ ಮಾಡಿ ಸ್ಥಳೀಯರು ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಜು.21ರಂದು ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರ ನೇತೃತ್ವದಲ್ಲಿ ಸರ್ವೆ ನಡೆಸಲಾಯಿತು.
ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ ಸರ್ವೆ ನಂ.33/3ರಲ್ಲಿ 0.62 ಎಕ್ರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ನೀರು ಸಂಗ್ರಹವಾಗದಂತೆ ಮಾಡಲಾಗಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಗಡಿ ಗುರುತು ಮಾಡಿ ಕೆರೆಯನ್ನು ಸಂರಕ್ಷಿಸಲು ಮುಂದಾಗಿರುವ ಕಂದಾಯ ಇಲಾಖೆ, ಭೂಮಾಪನ ಇಲಾಖೆಯ ಮೂಲಕ ಕೆರೆಯನ್ನು ಅಳತೆ ಮಾಡಿಸಲಾಯಿತು. ಅಳತೆ ಮಾಡಿದ ಸಂದರ್ಭದಲ್ಲಿ ಕೆರೆಯ ಮೂಲಕ ರಸ್ತೆಯೊಂದು ಹಾದು ಹೋಗಿರುವುದು ಕಂಡು ಬಂದಿದ್ದು ಈ ರಸ್ತೆಯನ್ನು ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರು ಬಂದ್ ಮಾಡಿಸಿದರು. ಈ ಬಗ್ಗೆ ಮಾತನಾಡಿದ ಕೊರಗಪ್ಪ ಹೆಗ್ಡೆಯವರು, ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ, ಅರ್ಪಾಜೆ ಕೆರೆ ಒತ್ತುವರಿ ಆಗಿರುವ ಬಗ್ಗೆ ದೂರು ಬಂದಿತ್ತು, ಈ ಹಿನ್ನಲೆಯಲ್ಲಿ ಸರ್ವೆ ನಡೆಸಿದಾಗ ಕೆರೆಯ ಜಾಗ ಬೇರೆ ಒತ್ತುವರಿಯಾಗಿಲ್ಲ, ಆದರೆ ಸ್ಥಳೀಯರು ರಸ್ತೆ ನಿರ್ಮಿಸಿದ್ದರು, ಈ ರಸ್ತೆಯನ್ನು ಬಂದ್ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಇಲ್ಲಿ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ನಾರಾಯಣ ಪೂಜಾರಿ, ಎ.ಎಸ್.ಶರೀಪ್, ಆದಂ ಕುಂಡೋಳಿ, ಪ್ರಮುಖರಾದ ಶೇಖರ ಅರ್ಪಾಜೆ, ಪ್ರಕಾಶ್ ಎನ್.ಕೆ,ಅಶೋಕ್ ಕುಮಾರ್.ಪಿ, ಸರ್ವೆಯರ್ ವೆಂಕಟ್ರಮಣ, ಗ್ರಾಮ ಸಹಾಯಕ ವಿಜಯ ಕುಮಾರ್, ರಮೇಶ್ ಹೊಸಮನೆ, ಕಡಬ ಗ್ರಾ.ಪಂ.ಕಾರ್ಯದರ್ಶಿ ಸಂತೋಷ್, ಸರ್ವೆ ಇಲಾಖೆಯ ಸಿಬಂದಿ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.