ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಜು.22. ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಗೋಡೆಯು ಈ ಹಿಂದೆ ಬಿರುಕು ಬಿಟ್ಟಿದ್ದು, ಶನಿವಾರದಂದು ಮೇಲ್ಛಾವಣಿ ಸಮೇತ ಗೋಡೆಯು ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ.

ಮಳೆಗಾಲ ಪ್ರಾರಂಭದಲ್ಲಿಯೇ ಕಟ್ಟಡ ಕುಸಿಯುವ ಹಂತದಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದು ಬದಲಿ ವ್ಯವಸ್ಥೆ ಮಾಡಿ ಪಾಠ ಪ್ರವಚನ ನಡೆಯುತ್ತಿದೆ. ಜಿ.ಪಂ. ಇಂಜಿನಿಯರ್ ಭರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೊದಲೇ ಕಟ್ಟಡ, ಕೊಠಡಿ ಸ್ಥಳವಕಾಶದ ಕೊರತೆಯಿರುವ ಈ ಕಾಲೇಜಿನಲ್ಲಿ ಈಗ ಕಟ್ಟಡ ಕುಸಿದಿರುವುದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಕಡಬ ವ್ಯಾಪ್ತಿಯ ಹಲವು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಹೆಚ್ಚಿನವರು ಮಧ್ಯಮ ವರ್ಗದವರಾಗಿದ್ದು, ಈ ಕಾಲೇಜನ್ನೇ ಆಶ್ರಯಿಸಿದ್ದಾರೆ. ಕೂಡಲೇ ಈ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು, ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.

Also Read  ’ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು, ಸಂತ್ರಸ್ತರು ಅಪರಾಧ ಮಾಡಿದಂತೆ ಭಯದಿಂದ ಬದುಕುವುದು’  ರಾಷ್ಟ್ರಪತಿ ದ್ರೌಪದಿ ಮುರ್ಮು        

ಕಡಬ ಪ.ಪೂ.ಕಾಲೇಜಿನ ಕಟ್ಟಡವು ತೀರಾ ಹಳೆಯದಾಗಿದ್ದು ಈ ಹಿಂದೆಯೇ ಹೊಸ ಕಟ್ಟಡ ನಿರ್ಮಾಣವಾಗಬೇಕಿತ್ತು. ಆದರೆ ಈಗಾಗಲೇ ಕಾಲೇಜಿಗೆ ಹೊಂದಿಕೊಂಡಂತೆ ಹೊಸ ಕಟ್ಟಡಗಳು ನಿರ್ಮಾಣಗೊಂಡಿದ್ದರೂ ತರಗತಿ ನಡೆಸಲು ಸ್ಥಳಾವಕಾಶ ಸಾಕಾಗದೇ ಇದೇ ಹಳೇಯ ಕಟ್ಟಡದಲ್ಲಿ ಕ್ಲಾಸ್ ನಡೆಸಲಾಗುತ್ತಿದ್ದು, ಕಳೆದ ತಿಂಗಳಿನಿಂದಲೇ ವಿಪರೀತ ಮಳೆ ಪ್ರಾರಂಭವಾಗಿರುವುದರಿಂದ ಕಟ್ಟಡದ ಒಂದು ಪಾರ್ಶ್ವದ ಗೋಡೆಯು ಕುಸಿದಿದ್ದು ಸಂಪೂರ್ಣ ಕುಸಿಯುವ ಮೊದಲೇ ಬದಲಿ ವ್ಯವಸ್ಥೆ ಮಾಡುವುದರೊಂದಿಗೆ ಈ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡದ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಜಿ.ಪಂ.ಸದಸ್ಯರ ಮುಖಾಂತರ ಮೇಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಬರೆದುಕೊಳ್ಳಲಾಗಿದೆ. ಗ್ರಾ.ಪಂ.ನಿಂದಲೂ ತುರ್ತು ಕ್ರಮಕ್ಕೆ ಆಗ್ರಹಿಸಲಾಗಿದೆ.
-ಬಾಬು ಮುಗೇರ, ಅಧ್ಯಕ್ಷರು ಗ್ರಾ.ಪಂ. ಕಡಬ

ಈ ಹಿಂದೆ ಹಲವು ಬಾರಿ ಪೋಷಕರ ಸಬೆಯಲ್ಲಿ, ಗ್ರಾಮ ಸಭೆಗಳಲ್ಲಿ, ಪಂ.ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿದ್ದು, ಇಲಾಖಾಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸದೆ ಪೂರ್ವಯೋಜನೆ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಇದು ಬೇಜಾಬ್ಧಾರಿಯ ಪರಮಾವಾದಿಯಾಗಿದ್ದು, ಇಲ್ಲಿ ಹೆಚ್ಚಾಗಿ ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.
-ಕೆ.ಎಂ.ಹನೀಫ್, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಕಡಬ ಗ್ರಾ.ಪಂ.

error: Content is protected !!
Scroll to Top