►►ಕವರ್ ಸ್ಟೋರಿ ► ಪೇರಡ್ಕ – ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!!

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಒಂದು ಕಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪತಗೊಂಡು ಸಂಚಾರದಲ್ಲಿ ಸುಗಮವಾಗುವ ಈ ಕಾಲದಲ್ಲಿ, ಅದೆಷ್ಟೋ ಗ್ರಾಮೀಣ ಭಾಗದ ರಸ್ತೆಗಳಿಗೆ ಇಂದಿಗೂ ದುರಸ್ಥಿ ಭಾಗ್ಯ ದೊರೆಯದೆ, ನಿತ್ಯ ನರಕಯಾತನೆಯಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿರುವುದು, ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅದರ ಕಷ್ಟದ ಅನುಭವ.! ಈ ಸಾಲಿಗೆ ಕಡಬ ತಾಲೂಕು ಕೇಂದ್ರವನ್ನು ಮತ್ತು ಸುಬ್ರಹ್ಮಣ್ಯ -ಧರ್ಮಸ್ಥಳ ರಾ.ಹೆ. ಹಾಗೂ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪ್ರಮುಖ ರಸ್ತೆಯಾದ  ಪೇರಡ್ಕ -ಕಾಯರಡ್ಕ ಜಿ.ಪಂ.ರಸ್ತೆಯು ಒಂದಾಗಿದೆ. ನಿತ್ಯ ಪ್ರಯಾಣಿಕರು ಹಿಡಿಶಾಪ ಹಾಕಿಕೊಂಡೆ ಪ್ರಯಾಣಿಸುವುದೇ ಒಂದು ದೊಡ್ಡ ಸಾಧನೆ..! ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಕಡಬ – ಕಲ್ಲುಗುಡ್ಡೆ ರಸ್ತೆಯ ಪೇರಡ್ಕದಿಂದ ಕಾಯರಡ್ಕವರೆಗಿನ ಸುಮಾರು ಎರಡು ಕಿ.ಮೀ.ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರು ನಿತ್ಯ ನರಕಯಾತನೆ ಪಡಬೇಕಿದೆ. ರಸ್ತೆ ದುರಸ್ಥಿ ಮಾಡಿ ಎಂದು ಸಂಬಂಧಪಟ್ಟವರಿಗೆ ಕೇಳಿಕೊಂಡರೆ ಜಿ.ಪಂ.ರಸ್ತೆಯಗಿರುವ ಈ ರಸ್ತೆಗೆ ವಾರ್ಷಿಕವಾಗಿ ದುರಸ್ಥಿಗೆ ಕೇವಲ ಅಲ್ಪ ಅನುದಾನ ಬರುವುದರಿಂದ ಸಮರ್ಪಕ ದುರಸ್ಥಿ ಅಸಾಧ್ಯ ಎಂಬ ಉತ್ತರ ಬರುತ್ತದೆ ಎಂಬುದು ನಾಗರಿಕರ ಮಾತು. ಸುಮಾರು ಇಪ್ಪತ್ತು ವರ್ಷಗಳಿಂದ ಈ ರಸ್ತೆಯು ಪೂರ್ಣ ಪ್ರಮಾಣದಲ್ಲಿ ದುರಸ್ಥಿಯಾಗಿಲ್ಲ. ಈ ಮಳೆಗಾಲದಲ್ಲಿ ತುರ್ತು ದುರಸ್ತಿಗೂ ಸಂಬಂಧಪಟ್ಟವರೂ ಮುಂದಾಗದ್ದು ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೆ ಕಡಬ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ಅನುಷ್ಠಾನದ ಹಂತದಲ್ಲಿರುವುದರಿಂದ ಕಂದಾಯ ಹಾಗೂ ಪ್ರಮುಖ ಇಲಾಖೆಗಳ ಕೆಲಸಕಾರ್ಯಗಳಿಗೆ ನೂಜಿಬಾಳ್ತಿಲ, ರೆಂಜಿಲಾಡಿ, ಇಚಿಲಂಪಾಡಿ, ಕೊಣಾಜೆ ಗ್ರಾಮದ ಜನರು ಇದೇ ರಸ್ತೆಯಾಗಿ ಪ್ರಯಾಣಿಸುತ್ತಾರೆ. ಅಲ್ಲದೆ ಈ ರಸ್ತೆಯು ರಾಜ್ಯದ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾಗೂ ಕಡಬ ಭಾಗದ ಜನರಿಗೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಸಂಪರ್ಕಿಸುವ ಸುಲಭ ದಾರಿಯಾಗಿದ್ದು ಲಿಂಕ್ ರಸ್ತೆಯಾಗಿದೆ.

Also Read  ಸುಬ್ರಮಣ್ಯ:  ಮಾ.12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ ಸಾಮೂಹಿಕ ವಿವಾಹ                                

ಈ ಕಾಯರಡ್ಕ ಪೇರಡ್ಕ ರಸ್ತೆ ದುರಾವಸ್ಥೆಯಿಂದ ಕೂಡಿದ್ದರೂ ಕೂಡ ಒಂದು ರೀತಿಯಲ್ಲಿ ಅಪತ್ಭಾಂದವ ರಸ್ತೆ ಕೂಡ ಹೌದು. ಈ ಮಳೆಗಾಲದಲ್ಲಿ ಹೊಸ್ಮಠ ಸೇತುವೆ ಹಲವು ಬಾರಿ ಮುಳುಗಡೆಗೊಂಡಿದ್ದ ಸಂದರ್ಭದಲ್ಲಿ ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಚರಿಸುವ ವಾಹನ, ಶಾಲಾ ಕಾಲೇಜು ವಾಹನ, ಸರಕಾರಿ ಬಸ್ಸುಗಳು ಈ ರಸ್ತೆಯ ಮೂಲಕವೇ ಸಾಗಬೇಕಾಗಿದ್ದು, ಅಪತ್ಭಾಂದವನೆನಿಸಿದೆ. ಆದರೂ ಕೂಡ ಇಂತಹ ರಸ್ತೆ ಇಂದು ಈ ರೀತಿಯಲ್ಲಿ ದುರಾವಸ್ಥೆಯಿಂದ ಕೂಡಿದ್ದು ದುರಂತವೇ ಸರಿ. ಈ ರಸ್ತೆಯಲ್ಲಿ ಕೇವಲ ಮಳೆಗಾಲ ಮಾತ್ರವಲ್ಲದೆ, ಬೆಸಿಗೆಯಲ್ಲೂ ಸಂಚರಿಸುವುದು ಕಷ್ಟವೆ ಆಗಿದ್ದು. ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿರುವುದು ಮತ್ತು ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣದಿಂದ ವಾಹನ ಸವಾರರಿಗೆ ನರಕಯಾತನೆಯಾದರೆ, ಬೇಸಿಗೆಯಲ್ಲಿ ಅಸಮರ್ಪಕ ರಸ್ತೆ ಹಾಗೂ ಧೂಳಿನಿಂದ ಕೂಡಿದ್ದು ಕಣ್ಣು ತೆರೆಯದಂತಹ ಪರಿಸ್ಥಿತಿ.

ಈ ರಸ್ತೆಯನ್ನು ಪೂರ್ಣವಾಗಿ ದುರಸ್ಥಿ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೂಜಿಬಾಳ್ತಿಲ ಗ್ರಾಮ ಸಭೆಯಲ್ಲೂ ಈ ರಸ್ತೆಯನ್ನು ದುರಸ್ಥಿ ಮಾಡಿ, ಅಥವಾ ಪಿಡಬ್ಯುಡಿ ಗೆ ಸೇರಿಸುವಂತೆ ನಿರ್ಣಯ ಕೈಗೊಂಡರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.  ಈ ರಸ್ತೆಯು ಕಡಬ ಹಳೆಸ್ಟೇಶನ್ ತಿರುವಿನಿಂದ ಕಾಯರಡ್ಕ ವರೆಗೆ ಸಡಕ್‍ನಲ್ಲಿ ಡಾಮರೀಕರಣವಾಗಿದ್ದರೆ, ಕಾಯರಡ್ಕದಿಂದ ಪೇರಡ್ಕವರೆಗೆ ಕೇವಲ ಎರಡು ಕಿ.ಮೀ. ಜಿ.ಪಂ ರಸ್ತೆ ದುರವಸ್ಥೆ  ಹೇಳತೀರದು. ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಕುಟ್ರುಪಾಡಿ ಸೈಂಟ್ ಮೇರಿಸ್ ಚರ್ಚ್, ಕಡಬ ಜುಮ್ಮಾ ಮಸೀದಿ, ಪೇರಡ್ಕ ಚರ್ಚ್,ಬೆಥನಿ ಕಾಲೇಜು, ಸಾನ್‍ತೋಮ್ ಶಾಲೆ, ಕೇಪು ಸರಕಾರಿ ಶಾಲೆ ಸೇರಿದಂತೆ ಕಾಯರಡ್ಕ ಪೇರಡ್ಕ ಹಾ.ಉ.ಸಂಘಕ್ಕೆ ಹೋಗುವವರಿಗೆ ಈ ರಸ್ತೆ ನರಕಯಾತನೆಯಾಗಿದೆ. ಕಡಬ ತಾಲೂಕು ಕೇಂದ್ರ ಸಂಪರ್ಕಿಸುವ ಈ ರಸ್ತೆ ಎಲ್ಲಾ ಪ್ರದಾನ ರಸ್ತೆಗಳಿಂದ ಕಡಬ ತಾಲೂಕು ಕೇಂದ್ರ ಸಂಪರ್ಕಿಸುವ ಚತುಸ್ಪಥ ರಸ್ತೆಯಾಗಬೇಕಿರುವುದು ಅನಿವಾರ್ಯವಗಿದೆ.

Also Read  ಅಮಾಯಕ ಜೀವವನ್ನು ಬಲಿಪಡೆದ ಹೊಸ್ಮಠದ ಅವೈಜ್ಞಾನಿಕ ಹಂಪ್ ➤ ಬೈಕ್ ಸ್ಕಿಡ್ ಆಗಿ ಮಹಿಳೆ ಮೃತ್ಯು

ಪೆರಡ್ಕ – ಕಾಯರಡ್ಕ ರಸ್ತೆ ದುರಾವಸ್ಥೆಯ ಬಗ್ಗೆ  ಕುಟ್ರುಪಾಡಿ ಗ್ರಾ.ಪಂ.ಗ್ರಾಮಸಭೆಯಲ್ಲಿ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಲ್ಲದೆ, ಕೂಡಲೇ ದುರಸ್ತಿ ಮಾಡಬೇಕೆಮದು ಒತ್ತಾಯಿಸಿದ್ದರು. ಅದೇ ರೀತಿ ಕಳೆದ ಎರಡು ಮೂರು ವರ್ಷಗಳ ನೂಜಿಬಾಳ್ತಿಲ ಗ್ರಾಮಸಭೆಗಳಲ್ಲೂ ಈ ರಸ್ತೆ ದುರಸ್ತಿಗೆ ನೂಜಿಬಾಳ್ತಿಲ ರೆಂಜಿಲಾಡಿಯ ಗ್ರಾಮಸ್ಥರು ಆಗ್ರಹಿಸಿದ್ದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ, ಈ ಸಲವು ನೂಜಿಬಾಳ್ತಿಲ ಗ್ರಾಮಸಭೆಯಲ್ಲಿ ಈ ರಸ್ತೆ ದುರಸ್ತಿಗೆ ಆಗ್ರಹಿಸುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ. ಇಲ್ಲಿ ಕೇವಲ ಎರಡು ಕಿ.ಮೀ.ನ ಹೊಂಡ ಗುಂಡಿ, ಕಿತ್ತು ಹೋದ ಡಾಮರು ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಇನ್ನೊಂದು ಅನಾಹುತ ಹೀಗೆ ಕಾಯರಡ್ಕದಿಂದ ಪೇರಡ್ಕ ತಲುಪಲು ಬರೊಬ್ಬರಿ 20ನಿಮಿಷ ಸಮಯ ಬೇಕಾಗುತ್ತದೆ.ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು ನಿತ್ಯ ಕಷ್ಟಪಟ್ಟು ಪ್ರಯಾಣಿಸುವುದು ಒಂದು ಕಡೆಯಾದರೆ, ಈ ರಸ್ತೆಯ ಎರಡು ಕಿ.ಮೀ.ದೂರವನ್ನು ಕ್ರಮಿಸಲು ತೆಗೆದುಕೊಳ್ಳುವ ಸಮಯ ಮಾತ್ರ ಅತೀ ಹೆಚ್ಚು. ಕಾರಣ, ಒಂದು ಗುಂಡಿ ತಪ್ಪಿಸಲು ಹೋಗಿ ಮುಂದಿನ ಗುಂಡಿಗೆ ವಾಹನಗಳ ಚಕ್ರ ಹೋಗಿರುತ್ತದೆ. ನಿತ್ಯ ವಾಹನ ಸವಾರರು ಈ ರಸ್ತೆ ದುಸ್ಥಿಯಿಂದ ತಮ್ಮ ವಾಹನದ ಬಾಳಿಕೆ ಹೆಚ್ಚು ಬರಲ್ಲ ಎಂಬ ಆಕ್ರೋಶವು ಇದೆ.

ಕೇವಲ ನಗರ ಪ್ರದೇಶದ ರಸ್ತೆಗಳನ್ನು ಮಾತ್ರ ಅಭಿವೃದ್ಧಿ ಮಾಡದೇ ಗ್ರಾಮೀಣ ಭಾಗದ ಇಂತಹ ರಸ್ತೆಯನ್ನು ಅಭಿವೃದ್ಧಿ ಮಾಡಿದಲ್ಲಿ ಗ್ರಾಮಾಭಿವೃದ್ದಿ ಸಾಧ್ಯ ಎಂಬುದು ನಾಗರಿಕರ ಮಾತು. ಇನ್ನಾದರೂ ಈ ಪ್ರಮುಖ ರಸ್ತೆಯಾದ ಕಾಯರಡ್ಕ – ಪೇರಡ್ಕ ರಸ್ತೆಯನ್ನು ಶೀಘ್ರವಾಗಿ, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ ಎಂದು ಜನತೆ ಆಗ್ರಹಿಸಿದ್ದಾರೆ.

Also Read  ಗೂಡ್ಸ್ ವಾಹನ ಡಿಕ್ಕಿ- ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮೃತ್ಯು..!

error: Content is protected !!
Scroll to Top