ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಆಲಂಕಾರು ಪಂಚಾಯತ್ ನಿಂದ ಇದೀಗ ಕಾನೂನು ಸಡಿಲಿಕೆ ► ನಾಯಿ, ಆಡುಗಳ ಆಶ್ರಯ ತಾಣವಾದ ಹಸಿ ಮೀನು ಮಾರುಕಟ್ಟೆ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಆಲಂಕಾರು ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಆಧ್ಯತೆ ನೀಡಿ ನಿರ್ಮಾಣ ಮಾಡಿದ ಹಸಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳಿಲ್ಲದೆ ನಾಯಿ, ಆಡುಗಳ ಆಶ್ರಯ ತಾಣವಾಗಿದೆ. ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿದರೆ  ವ್ಯಾಪಾರಿಗೆ  ನಷ್ಟವಾಗುತ್ತದೆ ಎಂದು ಪಂಚಾಯಿತಿ ಆಡಳಿತ ನಿರ್ದಾರದಿಂದ ಪೇಟೆಯ ವಿವಿದೆಡೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿರುವುದೆ ಮಾರುಕಟ್ಟೆ ಬಿಕೋ ಎನ್ನಲು ಕಾರಣವಾಗಿದೆ.

ಮೂರು ವರ್ಷದ ಹಿಂದೆ ಆಲಂಕಾರು ಪೇಟೆಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಹಸಿ ಮೀನು ಮಾರುಕಟ್ಟೆ ನಿರ್ಮಿಸಿ ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಈ ಮಾರುಕಟ್ಟೆಯಿಂದ ಪೇಟೆಯಲ್ಲಿ ಶುಚಿತ್ವಕ್ಕೆ ತೊಡಕಾಗಿದೆ ಎಂಬ ಕಾರಣ ನೀಡಿ ಮಾರುಕಟ್ಟೆಯ ಪರವಾನಿಗೆಯನ್ನು ರದ್ದುಪಡಿಸಿದ್ದರು. ಬಳಿಕ ಗ್ರಾಮ ಪಂಚಾಯಿತಿ ತನ್ನ ಅಧೀನದ ಜಾಗದಲ್ಲಿ 2.15 ಲಕ್ಷ ರೂಪಾಯಿ ವೆಚ್ಚದಲ್ಲಿ ಆಲಂಕಾರು ಎಪಿಎಂಸಿ ಕಟ್ಟಡದ ಬಳಿ ವ್ಯವಸ್ಥಿತ ನಾಲ್ಕು ಕೊಠಡಿಗಳ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಿ ಟೆಂಡರ್ ಮೂಲಕ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತ್ತು. ಪ್ರಥಮ ವರ್ಷ ಮಾರುಕಟ್ಟೆಯು 1.20 ಲಕ್ಷ ರೂಪಾಯಿಗೆ ಹರಜಾಗಿ ಮೀನು ಮಾರಾಟವು ಸುಸೂತ್ರವಾಗಿ ನಡೆಯಿತು. 2017-2018ನೇ ಸಾಲಿನ ವ್ಯಾಪಾರಕ್ಕೆ ಹರಾಜು ಪ್ರಕ್ರಿಯೆಯು ಅತ್ಯಂತ ಸ್ಪರ್ಧಾತ್ಮಕವಾಗಿ ನಡೆದು ಕಟ್ಟಡದ ಎಲ್ಲಾ ಕೊಠಡಿಗಳನ್ನು ಒಬ್ಬನೇ ಬಿಡ್ಡದಾರ ಬರೋಬ್ಬರಿ 5.20 ರೂಪಾಯಿಗೆ ಹರಾಜನ್ನು ತನ್ನದಾಗಿಸಿಕೊಂಡ.

Also Read  ಕೆರ್ಮಾಯಿ ಮತಗಟ್ಟೆಯಲ್ಲಿ ಅಧಿಕಾರಿಗಳ ಎಡವಟ್ಟು ➤ ಒಬ್ಬರ ಮತ ಚಲಾಯಿಸಿದ ಮತ್ತೋರ್ವ, ಕೆಲಕಾಲ ಗೊಂದಲ ಸೃಷ್ಟಿ

ಬಳಿಕದ ಬೆಳವಣಿಗೆಯಲ್ಲಿ ಪೆರಾಬೆ ಗ್ರಾಮ ಪಂಚಾಯಿತಿ ಆಲಂಕಾರು ಪೇಟೆಯ ಸಮೀಪ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಖಾಸಗಿ ಹಸಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸುದರ ಪರಿಣಾಮ ಮೀನು ಮಾರಾಟವು ಅತ್ಯಂತ ಜಿದ್ದಾಜಿದ್ದಿಯಲ್ಲಿ ನಡೆಯಿತು. ಇಂತಹ ಸ್ಪರ್ಧಾತ್ಮಕ ವ್ಯಾಪಾರದಿಂದ ಮಾರುಕಟ್ಟೆಯ ವ್ಯಾಪಾರಸ್ಥನಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸಿದ ಪರಿಣಾಮ ಸ್ಥಳಿಯಾಡಳಿತಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡ. ಮಾರುಕಟ್ಟೆಯ ವ್ಯಾಪಾರಿಯ  ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿಯು, ಪೇಟೆಯ ಶುಚಿತ್ವದ ವಿಚಾರವನ್ನು ಮರೆತು ಆಲಂಕಾರು ಪೇಟೆಯಲ್ಲಿಯೇ ಎರಡು ವರ್ಷಗಳ ಬಳಿಕ ವಾಹನದಲ್ಲಿ ಮೀನು ಮಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಬಳಿಕ ಕೆಲವು ದಿನಗಳ ನಂತರ ಶೆಡ್ಡನ್ನು ನಿರ್ಮಿಸಿ ಮೀನು ಮಾರಟಕ್ಕೆ ಅವಕಾಶ ಕಲ್ಪಿಸಿತು. ಲೋಕೋಪಯೋಗಿ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದ ತಕ್ಷಣ ಹುಲಿಯಂತೆ ಆರಂಭ ಶೂರತನ ಪ್ರದರ್ಶಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಳಿಕದ ದಿನಗಳಲ್ಲಿ ಇಲಿಯಂತೆ ತಣ್ಣಗಾದರು. ತಾತ್ಕಲಿಕ ಮಾರುಕಟ್ಟೆಯನ್ನು ತೆರವುಗೊಳಿಸುವುದಕ್ಕೆ ಪಣತೊಟ್ಟಿದ್ದ ಇಂಜಿನಿಯರ್ ಬಳಿಕ ದಿನಗಳಲ್ಲಿ ಜಾಣಮೌನಕ್ಕೆ ಜಾರಿದರು. ಇಂಜಿನಿಯರ್‍ರವರ ಮೌನ ಸಾರ್ವಜನಿಕ ವಲಯಕ್ಕೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

Also Read  ಮದ್ಯ ಸೇವಿಸಿ ಬಂದು ತಂದೆ-ಮಗನ ನಡುವೆ ಗಲಾಟೆ ➤ ಮಗನ ಕೊಲೆಯಲ್ಲಿ ಅಂತ್ಯ

ಆಗಸ್ಟ್ ತಿಂಗಳ ಅಂತ್ಯಕ್ಕೆ ಹಸಿ ಮೀನು ಮಾರುಕಟ್ಟೆಗೆ ಟೆಂಡರ್ ಕರೆಯಲಾಗುವುದು. ಪೇಟೆಯಲ್ಲಿ ಒಂದು ವರ್ಷದ ಅವಧಿಗಾಗಿ ಶೆಡ್ ನಿರ್ಮಿಸಿ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಇದು ತಾತ್ಕಾಲಿಕ ಮಾರುಕಟ್ಟೆ. ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ಮೀನು ಮಾರಾಟ ಮಾಡುವ ವಿಚಾರವಾಗಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಮತ್ತು ಮುಂದಿನ ಒಂದು ವರ್ಷಕ್ಕೆ ಇಡೀ ಆಲಂಕಾರು ಗ್ರಾಮದಲ್ಲಿ ತೆರೆದ ವಾಹನದಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಬಗ್ಗೆಯು ಚಿಂತಿಸಲಾಗುತ್ತಿದೆ.

– ಜಗನ್ನಾಥ ಶೆಟ್ಟಿ, ಪಿಡಿಓ ಆಲಂಕಾರು ಗ್ರಾಮ ಪಂಚಾಯಿತಿ

error: Content is protected !!
Scroll to Top