ಕಡಬ: ಒಂಟಿ ವೃದ್ದೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಪೇಟೆಯ ಹೊರವಲಯದ ಕೊರುಂದೂರು ಎಂಬಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಕಳ್ಳರು ವೃದ್ದೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕೋರಂದೂರು ಹರೀಶ್ ಎಂಬವರ ತಾಯಿ ವಯೋವೃದ್ಧೆ 90 ರ ಹರೆಯದ ಸತ್ಯಭಾಮ ಎಂಬವರ ಕತ್ತಿನಲ್ಲಿದ್ದ ಸುಮಾರು ನಾಲ್ಕು ಪವನ್‍ನ ಚಿನ್ನದ ಸರವನ್ನು ಇಬ್ಬರು ಕಳ್ಳರು ಎಗರಿಸಿದ್ದಾರೆ. ಮನೆಯಲ್ಲಿ ಹರೀಶ್ ಮತ್ತು ಅವರ ತಾಯಿ ಇಬ್ಬರೇ ವಾಸವಾಗಿದ್ದು, ಹರೀಶ್ ಅವರು ಸಂಜೆ ವೇಳೆಗೆ ಕಡಬ ಪೇಟೆಗೆ ಆಗಮಿಸಿದ್ದರು. ಇದೇ ಸಮಯವನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿ ಕಳ್ಳರು ಸಂಜೆ ಸುಮಾರು 7.30 ಹೊತ್ತಿಗೆ ವೃದ್ದೆ ಇರುವ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ವೃದ್ದೆ ಸತ್ಯಭಾಮ ತನ್ನ ಮಗ ಬಂದಿರಬಹುದೆಂದು ತಕ್ಷಣ ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆಯವುದನ್ನೇ ಕಾದಿದ್ದ ಕಳ್ಳರು ವೃದ್ದೆಯ ಕತ್ತಿಗೆ ಕೈ ಹಾಕಿ ಸರವನ್ನು ಎಗರಸಿದ್ದಾರೆ. ವೃದ್ದೆಯ ಕೈಯಲ್ಲಿದ್ದ ಚಿನ್ನದ ಬಳೆಯನ್ನಾಗಲೀ ಮನೆಯೊಳಗಿದ್ದ ನಗದು ಹಾಗೂ ಚಿನ್ನವನ್ನು ಮುಟ್ಟಲು ಹೋಗದೆ ವ್ಯವಸ್ಥಿತವಾಗಿ ಪರಾರಿಯಾಗಿದ್ದಾರೆ. ವೃದ್ದೆ ಬೊಬ್ಬೆ ಹೊಡೆದರೂ ಅಲ್ಲಿ ಯಾರಿಗೂ ಕೇಳಿಸುವ ಅವಕಾಶ ತುಂಬಾ ಕಡಿಮೆಯಿತ್ತು. ಯಾಕೆಂದರೆ ಪಕ್ಕದಲ್ಲಿ ಯಾವುದೇ ಮನೆಗಳು ಇರದ ಕಾರಣ ಅಜ್ಜಿಯ ಕೂಗು ಯಾರಿಗೂ ಕೇಳಿಸಿಲ್ಲ. ಇತ್ತ ಮಗ ಕೂಡಾ ಮನೆಗೆ ಆಗಮಿಸಿರಲಿಲ್ಲ. ಘಟನೆ ನಡೆದು ಅರ್ಧ ಗಂಟೆ ಬಳಿಕ ಹರೀಶ್ ಅವರು ಮನೆಗ ವಾಪಸ್ಸು ಬಂದಾಗ ವಿಷಯ ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಕಳ್ಳರು ಬಹುದೂರ ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಕಡಬ ಎಸ್.ಐ ಪ್ರಕಾಶ್ ದೇವಾಡಿಗ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಿಯಿಂದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಹೆಂಡತಿಯನ್ನು ತವರಿನಲ್ಲಿ ಬಿಟ್ಟ ಪತಿ ಮಹಾಶಯ ➤ ನಾದಿನಿಯೊಂದಿಗೆ ಪರಾರಿ

error: Content is protected !!
Scroll to Top