ವೃತ್ತಿಯಲ್ಲಿ ಸವಣೂರು ಮೆಸ್ಕಾಂ ಶಾಖಾ ಕಚೇರಿಯ ಜೂನಿಯರ್ ಎಂಜಿನೀಯರ್ ► ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಇವರು ಸವಣೂರು ಮೆಸ್ಕಾಂ ಶಾಖಾ ಕಚೇರಿ ಕಿರಿಯ ಎಂಜಿನೀಯರ್. ವೃತ್ತಿಯಲ್ಲಿ ಜೆಇ ಆಗಿದ್ದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ. ಹುಟ್ಟು ಕಲಾವಿದರಾದ ಇವರು ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಬಣ್ಣಹಚ್ಚಿ ಜನಮನ ಗೆದ್ದಿದ್ದಾರೆ. ರಜಾ ಸಮಯವನ್ನು ಕಲಾಸೇವೆಗಾಗಿಯೇ ವಿನಿಯೋಗಿಸುತ್ತಿರುವ ಇವರೇ ನಾಗರಾಜ್. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದ ಇವರು ಶಾಲಾ ಜೀವನದಲ್ಲಿಯೇ ಪೌರಾಣಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ, ಸೈ ಎನಿಸಿಕೊಂಡವರು.

ಮಹಾಭಾರತ, ರಾಮಾಯಣ, ಶನಿಮಹಾತ್ಮೆ, ದಕ್ಷಯಜ್ಞ, ದೇವಿಮಹಾತ್ಮೆ ಮೊದಲಾದ ಪೌರಾಣಿಕ ಸತ್ಯಹರಿಶ್ಚಂದ್ರ, ಕವಿರತ್ನ ಕಾಳಿದಾಸ ಮುಂತಾದ ಸಾಮಾಜಿಕ ನಾಟಕಗಳಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣ, ಶಕುನಿ, ದುರ್ಯೋಧನ, ಅರ್ಜುನ, ವಿಧುರಾ, ದಶರಥ, ಶ್ರೀರಾಮ, ಆಂಜನೇಯನ ಪಾತ್ರಗಳು ನಾಗರಾಜ್‍ರವರಿಗೆ ಹೆಚ್ಚಿನ ಹೆಸರನ್ನು ತಂದುಕೊಟ್ಟ ಪಾತ್ರಗಳು. ರಂಗಗೀತೆ, ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆಗಳನ್ನು ವಿವಿಧ ಕಡೆಗಳಲ್ಲಿ ಹಾಡಿ, ಸಂಗೀತ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ನಾಗರಾಜರು ಹಾರ್ಮೋನಿಯಂ ವಾದನವನ್ನೂ ನುಡಿಸುತ್ತಾರೆ. ಕಳೆದ ವರ್ಷ ಮಂಗಳೂರು ಕರಾವಳಿ ಉತ್ಸವದಲ್ಲಿ ಜಾನಪದ ಗೀತಗಾಯನದಲ್ಲಿ ಪಾಲ್ಗೊಂಡಿದ್ದಾರೆ. ಕಡಬದ ಶಶಿಗಿರಿವನ ಗಾನಸಿರಿ ತಂಡದಲ್ಲಿ ಗಾಯಕರಾಗಿ ನಿರಂತರವಾಗಿ ಭಾಗವಹಿಸಿರುವ ಇವರು ಮೆಸ್ಕಾಂ ಕಡಬ ಸಿಬ್ಬಂದಿ ವರ್ಗವನ್ನು ಸೇರಿಸಿಕೊಂಡು ಕಡಬದಲ್ಲಿ ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶಿಸಿರುವುದು ಇವರ ಹೆಚ್ಚುಗಾರಿಕೆ.

Also Read  ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲು ತೂರಾಟ ಪ್ರಕರಣ ► ಮೂವರು ಆರೋಪಿಗಳು ಖುಲಾಸೆ

ನಟನೆ, ಹಾಡುಗಾರಿಕೆಯೊಂದಿಗೆ ಪುಸ್ತಕವೆಂದರೂ ನಾಗರಾಜರಿಗೆ ವಿಶೇಷ ಪ್ರೀತಿ. ತನ್ನ ಬಿಡುವಿನ ವೇಳೆಯಲ್ಲಿ ನಾಟಕ, ಇತಿಹಾಸ ಚರಿತ್ರೆ, ದಾರ್ಶನಿಕರ ಜೀವನ, ಸಾಧನೆಗಳ ಕುರಿತು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ರಂಗಪರಿಷತ್‍ನ ಸದಸ್ಯರಾಗಿರುವ ನಾಗರಾಜರ ಅಭಿನಯ, ಪ್ರತಿಭೆಯನ್ನು ಗುರುತಿಸಿ ಅರ್ಹವಾಗಿಯೇ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ನಾನಾ ಸಂಘ-ಸಂಸ್ಥೆಗಳ ಸನ್ಮಾನಕ್ಕೂ ನಾಗರಾಜರು ಭಾಜನರಾಗಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸುಳುಗೋಡಿನ ನಾಗರಾಜ್ ಅವರು 2012ರಲ್ಲಿ ದ.ಕ. ಜಿಲ್ಲೆಯ ಉಜಿರೆಗೆ ಲೈನ್‍ಮ್ಯಾನ್ ಆಗಿ ಕರ್ತವ್ಯಕ್ಕೆ ಹಾಜರಾದರು. ಬಳಿಕ ಪದೋನ್ನತಿ ಹೊಂದಿ ಕಿರಿಯ ಎಂಜಿನೀಯರ್ ಆಗಿ ಮಂಗಳೂರಿನ ಕುಲಶೇಖರಕ್ಕೆ ವರ್ಗಾವಣೆಗೊಂಡರು. ಬಳಿಕ ಕಡಬಕ್ಕೆ ವರ್ಗಾವಣೆಗೊಂಡ ನಾಗರಾಜರು ಅಲ್ಲಿ ಸುಮಾರು 3 ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಪ್ರಸ್ತುತ ಸವಣೂರು ಮೆಸ್ಕಾಂ ಶಾಖೆಯಲ್ಲಿ ಜೆಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನನ್ನ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರಲ್ಲಿ ಕಲಾಕೌಸ್ತುಭ ಪ್ರಶಸ್ತಿ ಪುರಸ್ಕತರಾದ ರಂಗಭೂಮಿ ನಿರ್ದೇಶಕ ಎ.ಸಿ.ರಾಜ್, ನಂಜನಗೂಡಿನ ಶಿವರಂಜನಿ ಕಲಾತಂಡದ ಕಲಾವಿದ ಸೋಮರಾಜ್ ಪ್ರಮುಖರು. ಹಾಸನ, ಮೈಸೂರು, ಬೆಂಗಳೂರು, ತುಮಕೂರು, ನಾಗಮಂಗಲ ಇಲ್ಲಿಯ ರಂಗ ನಿರ್ದೇಶಕರೊಂದಿಗೆ ಒಡನಾಟವಿಟ್ಟುಕೊಂಡು ಅವರಿಂದ ನಾನು ತರಬೇತಿ ಪಡೆದಿರುತ್ತೇನೆ. ನಾನೊಬ್ಬ ಕಲಾವಿದನಾಗಿ ಬೆಳೆಯುವಲ್ಲಿ ನನ್ನ ಪತ್ನಿ ಮೋಹನ ಕುಮಾರಿ ಸಹಕರವೂ ಇದೆ.
– ನಾಗರಾಜ್

Also Read  ಮಟ್ಕಾ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ| ನಾಲ್ವರು ಅರೆಸ್ಟ್

3 ತಿಂಗಳ ಹಿಂದೆ ಸವಣೂರು ಜೆಇ ಆಗಿ ಕರ್ತವ್ಯಕ್ಕೆ ಹಾಜರಾದ ನಾಗರಾಜರು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಗುಣ ಮತ್ತು ಗ್ರಾಹಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಇವರು ರಂಗಚಟುವಟಿಕೆಯಂತೆ ವೃತ್ತಿಯಲ್ಲೂ ಕರ್ತವ್ಯ ನಿಷ್ಠೆ, ಕಾರ್ಯಪರತೆ ಹೊಂದಿದ್ದಾರೆ.

– ರಾಮಕೃಷ್ಣ ಪ್ರಭು, ಸಾಮಾಜಿಕ ಕಾರ್ಯಕರ್ತರು ಸವಣೂರು

error: Content is protected !!
Scroll to Top