(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.20. ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧಿಸಿದೆ.
ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಸಂಪಾಜೆ ನಿವಾಸಿ ನಾಟಿ ವೈದ್ಯ ಮೋಹನ್ ನಾಯಕ್ ಎಂದು ಗುರುತಿಸಲಾಗಿದೆ. ಗೌರಿ ಹತ್ಯೆಯಲ್ಲಿ ಆರೋಪಿಗಳಿಗೆ ಪಿಸ್ತೂಲು ಸರಬರಾಜು ಮಾಡಿದ ಆರೋಪವು ಈತನ ಮೇಲಿದ್ದು, ಎಸ್‍ಐಟಿ ತಂಡವು ಬುಧವಾರ ತಡರಾತ್ರಿ ಈತನನ್ನು ವಶಕ್ಕೆ ಪಡೆದಿದೆ. ಗುರುವಾರ ದಿನಪೂರ್ತಿ ಈತನನ್ನು ವಿಚಾರಣೆಗೊಳಪಡಿಸಿದ ತನಿಖಾ ತಂಡ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಪರಶುರಾಮ್ ವಾಗ್ಮೋರೆಯನ್ನು ತನಿಖೆಗೊಳಪಡಿಸಿದಾಗ ವಾಗ್ಮೋರೆಗೆ ಪಿಸ್ತೂಲು ರವಾನಿಸಿದ್ದ ಮಾಹಿತಿ ಮೇರೆಗೆ ಸುಳ್ಯದ ಸಂಪಾಜೆಗೆ ತೆರಳಿ ಮೋಹನ್ ನಾಯಕ್‍ನನ್ನು ವಶಕ್ಕೆ ಪಡೆಯಲಾಗಿದೆ.