(ನ್ಯೂಸ್ ಕಡಬ) newskadaba.com ಮಂಗಳೂರು, ಜು.19. ಜಿಲ್ಲೆಯ ಸುಮಾರು ಎಂಟು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಡರೋಗಿಗಳು ಅವಲಂಬಿಸಿ ಬರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಆಹಾರ ಪದಾರ್ಥಗಳನ್ನು ಕಸಿಯಲಾಗಿದೆಯಲ್ಲದೆ ಹಲವು ಜ್ವಲಂತ ಸಮಸ್ಯೆಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಶೀಘ್ರವಾಗಿ ಪರಿಹರಿಸಬೇಕೆಂದು ಎಸ್ ಡಿ ಪಿ ಐ ನಿಯೋಗವು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಭೇಟಿಯಾಗಿ ಆಗ್ರಹಿಸಿತು.
ಸರಕಾರಿ ಆಸ್ಪತ್ರೆಯ ಊಟದ ಮೆನುವಿನಲ್ಲಿ ಮಂಗಳೂರು ಎಂದರೆ ಮತ್ಸ್ಯ ನಗರಿ. ಹೀಗಾಗಿ ರೋಗಿಗಳಿಗೆ ಸರಕಾರದಿಂದ ಉಚಿತವಾದ ಮೀನು ಊಟ ಮತ್ತು ಹಾಲು ಬ್ರೆಡ್ ಸಿಗುತ್ತಿತ್ತು ಮತ್ತು ಮೀನು ಊಟ ತಿನ್ನದವರಿಗೆ ಹಾಲು ಮತ್ತು ಬ್ರೆಡ್ ನೀಡಲಾಗುತ್ತಿದ್ದು ಈಗ ಅದನ್ನು ನಿಲ್ಲಿಸಲಾಗಿದೆ. ಇದೀಗ ಅದೆಲ್ಲವನ್ನೂ ಕೈಬಿಟ್ಟು ವಾರಕ್ಕೆ ನಾಲ್ಕು ದಿನ ಮಾತ್ರ ಮೊಟ್ಟೆ ಯನ್ನು ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ನೀಡುವ ಹಾಲು ಕೂಡ ನೀರಾಗಿದೆ ಎಂದು ರೋಗಿಗಳು ಆರೋಪಿಸುತ್ತಿದ್ದಾರೆ. ಅದೇ ರೀತಿ ಸಿಟಿ ಸ್ಕ್ಯಾನಿಂಗ್ ಯಂತ್ರ ಒಂದು ವಾರದಿಂದ ಕೆಲಸ ಮಾಡುತ್ತಿಲ್ಲವಾಗಿದ್ದು, ಇದು ಬಹಳ ಅಗತ್ಯವಾಗಿರುವ ಉಪಕರಣವಾಗಿದೆ. ಉಪಕರಣಗಳು ಹಾಳಾದರೆ ಇಪ್ಪತ್ತ ನಾಲ್ಕು ಘಂಟೆಗಳ ಒಳಗಡೆ ದುರಸ್ತಿ ಮಾಡಬೇಕು ಎಂದು ಸರಕಾರದ ಆದೇಶ ಇದ್ದರೂ ಬೇಗನೆ ದುರಸ್ತಿ ಮಾಡದೆ ವಿಳಂಬ ಮಾಡುತ್ತಿರುವುದು ಕಂಡು ಬರುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಎಕ್ಸರೇ ಮತ್ತು ಔಷಧ ಗಳಿಗೂ ಹಣ ಪಡೆಯುತ್ತಿದ್ದು, ಇದು ಘೋರ ಅನ್ಯಾಯವಾಗಿದೆ. ಅದೇ ರೀತಿ ಲಿಫ್ಟ್ ಹಾಳಾಗಿ ವರ್ಷಗಳೇ ಕಳೆದಿದ್ದು, ಮೇಲಿನ ಮಹಡಿಗೆ ಟ್ರಾಲಿಯಿಂದಲೇ ರೋಗಿಗಳನ್ನು ದೂಡಿಕೊಂಡು ಹೋಗುವುದರಿಂದ ರೋಗಿಗಳು ಆಸ್ಪತ್ರೆಯ ಸಿಬ್ಬಂದಿಗಳು ತುಂಬಾ ಕಷ್ಟ ಪಡುತ್ತಿದ್ದಾರೆ. ಇಂತಹ ಹಲವಾರು ಆರೋಪಗಳು ರೋಗಿಗಳಿಂದ ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಹೀಗಾಗಿ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದನ್ನು ಗಂಭೀರವಾಗಿ ಪರಿಗಣಿಸಿದ್ದು,
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿರುವ ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಶೀಘ್ರವಾಗಿ ಪರಿಹರಿಸಬೇಕೆಂದು ಎಸ್ ಡಿ ಪಿ ಐ ನಿಯೋಗವು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಭೇಟಿಯಾಗಿ ಆಗ್ರಹಿಸಿತು.
ನಿಯೋಗದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯರಾದ ಮುನೀಬ್ ಬೆಂಗ್ರೆ, ಎಸ್ ಡಿ ಪಿ ಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುಹೈಲ್ ಖಾನ್, ಸಮಿತಿ ಸದಸ್ಯರಾದ ಸಫ್ವಾನ್ ಮತ್ತು ಇತರರು ಉಪಸ್ಥಿತರಿದ್ದರು.