ರಬ್ಬರ್ ನಿಗಮದ ಗಿಡ ಸಾಗಾಟದಿಂದಾಗಿ ಕೆಸರುಗದ್ದೆಯಾದ ಬ್ರಾಂತಿಕಟ್ಟೆ – ಕೊಡೆಂಕಿರಿ ರಸ್ತೆ ► ವಾಹನ ತಡೆದು ಪ್ರತಿಭಟನೆ, ರಸ್ತೆ ದುರಸ್ಥಿಗೆ ಆಗ್ರಹ, ಸಂಜೆಯೊಳಗೆ ದುರಸ್ಥಿಗೆ ಒಪ್ಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.17. ಐತ್ತೂರು ಗ್ರಾ.ಪಂ.ವ್ಯಾಪ್ತಿಯ ಬ್ರಾಂತಿಕಟ್ಟೆ, ಕೊಡೆಂಕಿರಿ ರಸ್ತೆಯ ದುರಾವಸ್ಥೆ, ಕೆಎಫ್‍ಡಿಸಿ ನಿಗಮದಿಂದ ಸಾಗಿಸುತ್ತಿದ್ದ ರಬ್ಬರ್ ಗಿಡಗಳ ವಾಹನವನ್ನು ತಡೆಗಟ್ಟಿ ಗುತ್ತಿಗೆದಾರರನ್ನು ತಡೆದು ಸಾರ್ವಜನಿಕರಿಂದ ಸೋಮವಾರದಂದು ಬ್ರಾಂತಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಳೆದ ಹಲವಾರು ವರ್ಷಗಳಿಂದ ದುರಸ್ಥಿ ಕಾಣದೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿರುವ ಈ ರಸ್ತೆಯನ್ನು ಊರಿನ ಗ್ರಾಮಸ್ಥರೇ ಒಟ್ಟಾಗಿ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ಪ್ರತೀ ವರ್ಷ ತಾವೇ ಹಣ ಹೊಂದಿಸಿಕೊಂಡು ಸುಮಾರು 50, 60 ಲಾರಿ ಟಿಪ್ಪರ್‍ಗಳಲ್ಲಿ ಚರಲ್ (ದಪ್ಪ ಮರಳು) ಹಾಕಿ ಶ್ರಮದಾನದ ಮೂಲಕ ದುರಸ್ಥಿ ಮಾಡಿಕೊಂಡು ಅಲ್ಲಿಂದಲ್ಲಿಗೆ ಸಂಚರಿಸುತ್ತಿದ್ದರು. ಕಳೆದ ಒಂದು ವಾರದಿಂದ ವಿಪರೀತ ಮಳೆಯಿಂದ ಮತ್ತೇ ಕೆಸರುಮಯವಾಗಿರುವ ರಸ್ತೆಯಲ್ಲಿ ಕೆಎಫ್‍ಡಿಸಿ ನಿಗಮದವರು ಟಿಪ್ಪರ್ ಹಾಗೂ ಪಿಕಪ್‍ಗಳಲ್ಲಿ ನಿಗಮದ ರಬ್ಬರ್ ಸಸಿಗಳನ್ನು ಕೊಡೆಂಕಿರಿ ಬ್ರಾಂತಿಕಟ್ಟೆ ಮೂಲಕ ಬೇರೆ ಬೇರೆ ಪ್ರದೇಶಗಳಿಗೆ ಸಾಗಿಸುತ್ತಿದ್ದು ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದೆ ಶೋಚನೀಯ ಸ್ಥಿತಿ ನಿರ್ಮಾಣಗೊಂಡಿದ್ದು ಆಕ್ರೋಶಿತಗೊಂಡ ಗ್ರಾಮಸ್ಥರು ಒಟ್ಟಾಗುವುದರ ಮೂಲಕ ರಸ್ತೆ ಹೋರಾಟ ಸಮಿತಿಯವರ ನೇತೃತ್ವದಲ್ಲಿ ರಬ್ಬರ್ ಗಿಡಗಳನ್ನು ಕೊಂಡೋಯ್ಯುವ ಟಿಪ್ಪರ್ ಹಾಗೂ ಪಿಕಪ್‍ನ್ನು ತಡೆದು ಪ್ರತಿಭಟಿಸಿದಲ್ಲದೆ ಗುತ್ತಿಗೆದಾರರನ್ನು ಕೂಡ ತಡೆದು ರಸ್ತೆ ದುರಸ್ಥಿ ಮಾಡದೆ ಯಾವುದೇ ಕಾರಣಕ್ಕೂ ವಾಹನಗಳನ್ನು ಕೊಂಡು ಹೋಗಲು ಬಿಡುವುದಿಲ್ಲ ಎಂದು ತಮ್ಮ ವಾಹನಗಳನ್ನು ಅಡ್ಡಲಾಗಿ ಇಟ್ಟು ಪ್ರತಿಭಟಿಸಿದರು. ಪ್ರಕರಣವು ಗಂಭೀರ ಸ್ಥಿತಿಗೆ ತಲುಪುವ ಮಾಹಿತಿಯನ್ನು ಪಡೆದುಕೊಂಡ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಕೂಡಲೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಬಗ್ಗೆ ಅರಿತುಕೊಂಡು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದಲ್ಲದೆ ಸ್ಥಳದಲ್ಲಿದ್ದ ಗುತ್ತಿಗೆದಾರ ಪಾಲಾ ರಬ್ಬರ್ ನರ್ಸರಿಯ ಮಾಲಕ ಸಜಿರವರಿಗೆ ಸಂಜೆಯೊಳಗೆ ರಸ್ತೆ ಪಾಲಾದಲ್ಲಿ ದಪ್ಪ ಮರಳು ಹಾಕಿ ದುರಸ್ಥಿಗೊಳಿಸಬೇಕೆಂದು ಸೂಚಿಸಿದರು. ಅವರ ಸೂಚನೆಯಂತೆ ಗುತ್ತಿಗೆದಾರರು ಸಂಜೆಯೊಳಗೆ ದಪ್ಪ ಮರಳು ಹಾಕಿ ರಸ್ತೆ ದುರಸ್ಥಿಗೊಳಿಸುವುದಾಗಿ ಒಪ್ಪಿಕೊಂಡರು. ಬಳಿಕ ರಬ್ಬರ್ ಗಿಡ ತುಂಬಿದ ವಾಹನವನ್ನು ಅಲ್ಲಿಂದ ಬಿಡಲಾಯಿತು. ಸಂಜೆಯೊಳಗೆ ದುರಸ್ಥಿಗೊಳಿಸದಿದ್ದಲ್ಲಿ ಮತ್ತೇ ವಾಹನ ತಡೆದು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

Also Read  ಉಡುಪಿ :ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ಸಂದರ್ಭದಲ್ಲಿ ರಸ್ತೆ ಅಭಿವೃದ್ದಿ ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ಟಿ ತೋಮಸ್, ಉಪಾಧ್ಯಕ್ಷರಾದ ದುಷ್ಯಂತ ಕೊಡೆಂಕಿರಿ, ದೇವಪ್ಪ ಕೊಡೆಂಕಿರಿ, ಎಂ.ಡಿ ತೋಮಸ್, ಕೋಶಾಧಿಕಾರಿ ಯೋಗೀಶ್ ಪಂಜೋಡಿ, ಸದಸ್ಯರಾದ ನವೀನ ಕೊಡೆಂಕಿರಿ, ಪಿ.ಕೆ ಬಿನು, ಜಾರ್ಜ್ ಕುಟ್ಟಿ ಟಿ.ಕೆ, ಕೆ.ಟಿ ಮತ್ತಾಯಿ, ಭಗವತಿ ಹೋಟೆಲ್ ಮಾಲಕ ಗೋಪಾಲಕೃಷ್ಣ, ಎಂ.ಡಿ ಜೋನಿ, ಕೆ.ಟಿ ಅಬ್ರಹಾಂ, ಜೋಮೋನ್, ರೆಜಿ, ವಿನಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬ್ರಾಂತಿಕಟ್ಟೆ-ಕೊಡೆಂಕಿರಿ ರಸ್ತೆ ಊರಿನವರು ಶ್ರಮಪಟ್ಟು ಅವರಾಗಿಯೇ ದುರಸ್ಥಿ ಮಾಡಿಕೊಂಡಿದ್ದಾರೆ. ಆದರೆ ಈಗ ಮಳೆಗಾಲ ಕೂಡ ಜೋರಾಗಿರುವುದರಿಂದ ಇದೇ ಸಮಯದಲ್ಲಿ ಕೆಎಫ್‍ಡಿಸಿ ಯವರು ಸರಾಗವಾಗಿ ಇಲ್ಲಿಂದ ರಬ್ಬರ್ ಗಿಡ ಸಾಗಿಸುತ್ತಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ರಬ್ಬರ್ ಗಿಡ ಸಾಗಿಸುವ ನಿಗಮಗಳಿಗೆ ರಸ್ತೆಯ ಬಗ್ಗೆ ಗೊಡವೆಯೇ ಇಲ್ಲ. ನಿಗಮದ ಎಂಡಿಯವರಿಗೂ ನಾನು ಈಗಾಗಲೇ ಮಾತನಾಡಿದ್ದೇನೆ. ಈಗ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಿದ್ದು ಇವತ್ತೇ ಅತೀ ಹೊಂಡ ಬಿದ್ದ ರಸ್ತೆ ದಪ್ಪ ಮರಳು ಹಾಕಿ ದುರಸ್ಥಿಗೊಳಿಸಬೇಕೆಂದು ತಿಳಿಸಲಾಗಿದ್ದು ಅವರು ಒಪ್ಪಿಕೊಂಡಿದ್ದಾರೆ. ಈಗ ಅವರಿಗೆ ಈ ತುಂಬಿದ ರಬ್ಬರ್ ಗಿಡಗಳನ್ನು ಸಾಗಿಸಲು ವಾಹನ ಬಿಡಲಾಗಿದೆ. ಮುಂದೆ ಈ ರಸ್ತೆ ದುರಸ್ಥಿಗೆ ತನ್ನ ಜಿ.ಪಂ.ಅನುದಾನದಲ್ಲಿ 2ಲಕ್ಷ ರೂ.ಅನುದಾನ ಕೂಡ ನೀಡಲಾಗುವುದು.
► ಪಿ.ಪಿ ವರ್ಗೀಸ್, ಜಿ.ಪಂ.ಸದಸ್ಯರು

Also Read  ? ಸುಳ್ಯ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಊರಿನವರ ಸಹಕಾರದೊಂದಿಗೆ ಹಲವಾರು ಸಮಯಗಳಿಂದ ಈ ರಸ್ತೆಯನ್ನು ದುರಸ್ಥಿ ಮಾಡುತ್ತಿದ್ದು ಈ ವರ್ಷ ಏಕಾಏಕಿ ನಿಗಮದವರು ತಮ್ಮ ನಿಗಮದ ರಬ್ಬರ್ ಗಿಡಗಳನ್ನು ಈ ರಸ್ತೆಯಲ್ಲಿ ನಿರಂತರ ಕಳೆದೊಂದು ವಾರದಿಂದ ಸಾಗಿಸುತ್ತಿರುವುದರಿಂದ ರಸ್ತೆ ಪೂರ್ತಿ ಕೆಸರುಮಯವಾಗಿ ಹೊಂಡ ಗುಂಡಿಗಳಿಂದ ಕೂಡಿದೆ. ರಾತ್ರಿ ಹೊತ್ತಲ್ಲಿ ಬರುವ ದ್ವಿಚಕ್ರ ಹಾಗೂ ಇತರ ವಾಹನಗಳು ಕೆಸರಲ್ಲಿ ಕಾಣದೆ ಹೊಂಡಕ್ಕೆ ಬಿದ್ದು ಅಲ್ಲಿಯೇ ಬಾಕಿಯಾಗುತ್ತಿದ್ದು ಈ ಭಾಗದವರಿಗೆ ಸಂಕಷ್ಟ ಎದುರಾಗಿದೆ. ನಿಗಮದವರಲ್ಲಿ ರಸ್ತೆ ದುರಸ್ಥಿ ಬಗ್ಗೆ ಅದೆಷ್ಟೋ ಸಲ ಕೇಳಿಕೊಂಡರೂ ಅವರು ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿರುವುದಿಲ್ಲ. ಈಗ ಗ್ರಾಮಸ್ಥರಾದ ನಾವೆಲ್ಲಾ ಒಟ್ಟಾಗಿ ಹೋರಾಟ ಸಮಿತಿಯ ಮುಖಾಂತರ ಸಸಿ ಸಾಗಿಸುವ ಗುತ್ತಿಗೆದಾರರ ವಾಹನ ತಡೆದು ಪ್ರತಿಭಟಿಸಿದ್ದು ಸಂಜೆಯೊಳಗೆ ರಸ್ತೆ ದುರಸ್ಥಿ ಮಾಡುವುದಾಗಿ ಗುತ್ತಿಗೆದಾರ ಸಜಿಯವರು ಭರವಸೆ ನೀಡಿದಂತೆ ಸಧ್ಯಕ್ಕೆ ವಾಹನ ಬಿಡಲಾಗಿದೆ. ರಸ್ತೆ ದುರಸ್ಥಿ ಮಾಡದಿದ್ದರೆ ಈ ರಸ್ತೆಯಲ್ಲಿ ಮತ್ತೇ ಸಸಿ ಸಾಗಾಟ ಮಾಡದಂತೆ ತಡೆಯಲಾಗುವುದು.
► ವಿ.ಎಂ ಕುರಿಯನ್, ಅಧ್ಯಕ್ಷರು ರಸ್ತೆ ಅಭಿವೃದ್ದಿ ಹೋರಾಟ ಸಮಿತಿ.

Also Read  ಬೆಳ್ಳಾರೆ ಪಂಚಾಯತ್ ನಿರ್ಣಯ ಮದ್ಯದಂಗಡಿಗಳಿಗೆ ಅನ್ವಯವಿಲ್ಲವೇ..? ➤ ದಲಿತ ಮುಖಂಡ ಆನಂದ ಬೆಳ್ಳಾರೆ ಆಕ್ಷೇಪ

error: Content is protected !!
Scroll to Top