(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.15. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಜು. 15ರಂದು ಭಾನುವಾರ ಉದ್ಘಾಟನೆ ನಡೆಯಲಿದ್ದು, ವಾಹನಗಳ ಓಡಾಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜನವರಿ 20ರಿಂದ ರಸ್ತೆ ಬಂದ್ ಆಗಿತ್ತು:
ಕಾಮಗಾರಿ ಸಲುವಾಗಿ ಈ ರಸ್ತೆಯಲ್ಲಿ 2018 ಜನವರಿ 20ರಿಂದ ವಾಹನ ಸಂಚಾರ ನಿಷೇಧ ಹೇರಲಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಕಾಮಗಾರಿ ಪೂರ್ಣಗೊಳಿಸಲು 2018 ಜನವರಿಯಿಂದ 15 ತಿಂಗಳು 2019ರ ಎಪ್ರಿಲ್ ತನಕ ಅವಕಾಶ ಇದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಹೆದ್ದಾರಿ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿಶೇಷ ಆಸಕ್ತಿಯಿಂದಾಗಿ ಕೆಲಸ ಪೂರ್ಣಗೊಳಿಸಿ ಜೂನ್ ಅಂತ್ಯದ ಒಳಗಾಗಿ ಬಿಟ್ಟು ಕೊಡುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ವೇಗಕ್ಕೆ ಹಿನ್ನಡೆ ಆಗಿದ್ದು, ಒಟ್ಟು 6 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ರಸ್ತೆ ಸಂಚಾರಕ್ಕೆ ಮುಕ್ತ ಆಗುವ ರೀತಿಯಲ್ಲಿ ಸಿದ್ಧವಾಗಿದೆ.
2014ರಲ್ಲಿ ಮಂಜೂರು ಆಗಿದ್ದ ಯೋಜನೆ:
ಶಿರಾಡಿ ಘಾಟ್ ರಸ್ತೆಯ ಮೊದಲ ಹಂತದ ಕಾಮಗಾರಿ ಸಕಲೇಶಪುರದ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ.ಮೀ. ಕಾಂಕ್ರಿಟೀಕರಣ 69.90 ಕೋಟಿ ರೂಪಾಯಿಯಲ್ಲಿ ಆಗಿದ್ದು, ಇದೀಗ ಕಾಮಗಾರಿ ನಿರ್ವಹಿಸಿರುವ ಓಷಿಯನ್ ಕನ್ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಟ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ನಡೆಸಿತ್ತು. 2015 ಆಗಸ್ಟ್ 10ರಂದು ಕೇಂದ್ರ ಸರ್ಕಾರದ ಭೂಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉಪಸ್ಥಿತಿಯಲ್ಲಿ ರಸ್ತೆ ಉದ್ಘಾಟನೆಗೊಂಡಿತ್ತು.