(ನ್ಯೂಸ್ ಕಡಬ) newskadaba.com ಕಡಬ,ಜು.14. ಬಿಳಿನೆಲೆ-ಕೈಕಂಬ ಶಾಲಾ ಮಕ್ಕಳಿಂದ ಸುಬ್ರಹ್ಮಣ್ಯ ಸಮೀಪದ ರಾಮಣ್ಣ ಗೌಡರ ಗದ್ದೆಯಲ್ಲಿ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ನಡೆಸಿದರು.
ರವಿಕುಮಾರ್ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿ ಕೃಷಿತೋ ನಾಸ್ತಿ ದುರ್ಭಿಕ್ಷಂ ಎನ್ನುವಂತೆ ನಮ್ಮ ನಾಡಿನ ಕೃಷಿಯ ಬಗ್ಗೆ ಗೌರವ ಕಾಳಜಿ ಮುಂದುವರೆಸಬೇಕೆಂಬ ನಿಟ್ಟಿನಲ್ಲಿ ಕೈಕಂಬ ಶಾಲಾ ವತಿಯಿಂದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಇಲ್ಲಿಯ ಪ್ರಗತಿಪರ ಕೃಷಿಕರಾದ ರಾಮಣ್ಣ ಗೌಡರ ಗದ್ದೆಗೆ ಇಳಿದು ಭತ್ತದ ನಾಡಿಯನ್ನು ಮಾಡುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಭತ್ತದ ಕೃಷಿಯ ಪ್ರಾಧಾನ್ಯತೆಯ ಬಗ್ಗೆ ಅರಿವು ಮೂಡಿಸುವಂತಾಗಿದೆ ಎಂದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ ವೇದಗಳ ಕಾಲದಿಂದಲೂ ಜನರ ಜೀವನೋಪಾಯವಾಗಿರುವ ಕೃಷಿ ನಮ್ಮ ಮೂಲ ಆದಾಯ ಮಾತ್ರವಲ್ಲದೆ ಆರೋಗ್ಯ ಕಾಯುವ ಮಹತ್ವದ ಆಹಾರ ಪದ್ದತಿಯಾಗಿದೆ. ಆದರೆ ಇಂದು ಪ್ರಾಮುಖ್ಯ ಸಾವಯವ ಗೊಬ್ಬರದಿಂದ ಬೆಳೆಸುವ ಮೂಲಕ ಜೀವನಕ್ಕೆ ಆಧಾರವಾಗಿರುವ ಭತ್ತದ ಕೃಷಿಯನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಇಂದಿನ ಈ ಬದಲಾದ ಕಾಲಘಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಪ್ರೀತಿ ಹುಟ್ಟಿಸುವ ಮೂಲಕ ಅವರಿಗೆ ಬದುಕಿನ ಬೆಳಕನ್ನು ಕಾಣಿಸುವ ಇಂತಹ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು. ತುಂತುರು ಮಳೆಹನಿಗಳ ನಡುವೆಯೂ ವಿದ್ಯಾರ್ಥಿಗಳು ನೇಜಿಯನ್ನು ಗದ್ದೆಯಲ್ಲಿ ಉತ್ಸಾಹದಿಂದ ಇಳಿದು ನೆಡುವ ಮೂಲಕ ಭತ್ತದ ನಾಟಿ ಮಾಡಿದರು. ಶಿಕ್ಷಕರಾದ ವನಿತಾ ಕೆ, ಅಂಬಿಕಾ ಎನ್, ಸಿದ್ದಲಿಂಗಸ್ವಾಮಿ ಭತ್ತದ ನಾಟಿಯಲ್ಲಿ ಮಕ್ಕಳೊಂದಿಗೆ ಸಹಕರಿಸಿದರು. ಪದವೀಧರೆ ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.