ಆಲಂಕಾರು: ಆಹಾರ ಬೆಳೆ ಪ್ರಧಾನವಾಗಲಿ: ಪ್ರಮೀಳಾ ಜನಾರ್ಧನ್

ಆಲಂಕಾರಿನಲ್ಲಿ ಕಡಬ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಉದ್ಘಾಟನೆ:

(ನ್ಯೂಸ್ ಕಡಬ) newskadaba.com ಆಲಂಕಾರು,ಜೂ13. ನಾವಿಂದು ಸ್ವಾರ್ಥಕ್ಕೆ ಬಿದ್ದು ವಾಣಿಜ್ಯ ಬೆಳೆಗಳಿಗೆ ಮಾರು ಹೋಗುತ್ತಿದ್ದೇವೆ ಹೀಗೆ ಮುಂದುವರಿದರೆ ಮುಂದೆ ಎಲ್ಲಾ ಆಹಾರ ಬೆಳೆಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ, ಈ ಹಿನ್ನೆಯಲ್ಲಿ ರೈತ ಬಾಂಧವರು ನಮ್ಮಲ್ಲೇ ಹೆಚ್ಚು ಹೆಚ್ಚು ಆಹಾರ ಬೆಳೆಗಳನ್ನು ಬೆಳೆಯುವುದಕ್ಕೆ ಒತ್ತು ನೀಡಬೇಕು ಎಂದು ಬೆಳಂದೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮಿಳಾ ಜನಾರ್ಧನ್ ಹೇಳಿದರು.
ಅವರು ಶುಕ್ರವಾರ ಆಲಂಕಾರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ದ.ಕ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ವತಿಯಿಂದ ಕಡಬ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ನಮ್ಮಲ್ಲಿ ಇಂದು ಆಧುನಿಕ ಕೃಷಿ ಪದ್ದತಿಯ ಬಗ್ಗೆ ಮಾಹಿತಿಯ ಕೊರತೆ ಇದೆ, ಇದಕ್ಕಾಗಿ ಅಧಿಕಾರಿಗಳು ನಮ್ಮ ಮನೆಯ ಬಾಗಿಲಿಗೆ ಬಂದು ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ನಾವು ಸದುಪಯೋಗಪಡಿಸಿಕೊಂಡು ಕೃಷಿ ಅಭಿವೃದ್ಧಿ ಮಾಡಬೇಕು ಅದರಲ್ಲೂ ವಾಣಿಜ್ಯ ಬೆಳೆಗಿಂತಲೂ ಆಹಾರ ಬೆಳೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ವಿಷಮುಕ್ತ ಸಾವಯವ ಕೃಷಿ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಮೀಳಾ ಜನಾರ್ಧನ್ ಹೇಳಿದರು. ಕೃಷಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿದ ಪುತ್ತೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರ ಕನ್ಯಾಮಂಗಲ ಮಾತನಾಡಿ ಕೃಷಿ ಬದುಕು ನಮ್ಮ ಬಾಳಿನ ನೆಮ್ಮದಿಯನ್ನು ಕಾಯ್ದುಕೊಂಡು ಬರುತ್ತದೆ, ಆದರೆ ನಾವಿಂದು ಕೃಷಿ ಬದುಕಿನಿಂದ ವಿಮುಕ್ತರಾಗುತ್ತಿದ್ದೇವೆ, ಎಲ್ಲವನ್ನೂ ನೀಡಿದ ಪ್ರಕೃತಿಗೆ ನಾವು ದ್ರೋಹ ಬಗೆದು ವಿಷವನ್ನು ನೀಡಿ ಬದಕು ಹಾಳು ಮಾಡುತ್ತಿದ್ದೇವೆ, ಪ್ರಕೃತಿಯನ್ನು ಪೂಜ್ಯಭಾವನೆಯಿಂದ ಕಂಡು ಸಮೃದ್ಧ ಕೃಷಿಯೊಂದಿಗೆ ಜೀವನ ಕಟ್ಟಿಕೊಳ್ಳಬೇಕು ಎಂದರು. ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುನಂದ ಬಾರ್ಕುಳಿ ಸಭೆಯ ಅಧ್ಯಕ್ಷತೆವಹಿಸಿದ್ದರು
ತಾಲೂಕು ಪಂಚಾಯಿತಿ ಸದಸ್ಯರಾದ ತಾರಾ ಕೇಪುಳು, ಜಯಂತಿ ಆರ್ ಗೌಡ, ಲಲಿತಾ ಈಶ್ವರ, ಆಲಂಕಾರು ಗ್ರಾ,ಪಂ ಉಪಾಧ್ಯಕ್ಷ ಸುಧಾಕರ ಪ್ರಜಾರಿ ಕಲ್ಲೇರಿ ಮಾತನಾಡಿದರು. ಗ್ರಾ,ಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಪಶುವೈದ್ಯಾಧಿಕಾರಿ ಅಶೋಕ್ ಕೊಲ, ತೋಟಗಾರಿಕಾ ಇಲಾಖಾಧಿಕಾರಿ ಬಸವರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕಡಬ: ಸಾಹಿತಿ ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ

ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಯೀಮ್ ಹುಸೈನ್ ಪ್ರಸ್ತಾವನೆಗೈದರು. ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಸ್ವಾಗತಿಸಿದರು. ಪುತ್ತೂರು ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ ವಂದಿಸಿದರು. ನಿವೃತ್ತ ಕೃಷಿ ಅಧಿಕಾರಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೃಷಿ ಅಭಿಯಾನ ಜಾಥ ರಾಮಕುಂಜ, ಕೊಲ, ಸವಣೂರು, ಕಾಣಿಯೂರು ಮುಂತಾದೆಡೆ ಸಾಗಿ ರೈತರಿಗೆ ಮಾಹಿತಿಯನ್ನು ನೀಡಲಾಯಿತು.
ಬಾಕ್ಸ್: ಫಝಲ್ ಭೀಮಾ ಯೋಜನೆಯ ಮಾಹಿತಿ ನೀಡಿ:
ಸಭಾ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಗ್ರಾಮಸ್ಥ ಗೋಪಾಲಕೃಷ್ಣ ಭಟ್ ನೈಮಿಷ ಮಾತನಾಡಿ ಫಸಲ್ ಭೀಮಾ ಯೋಜನೆಯ ಬಗ್ಗೆ ಗೊಂದಲ ಇದೆ ಇದರ ಬಗ್ಗೆ ಮಾಹಿತಿ ಬೇಕು, ಯೋಜನೆಯ ಕಂತು ಪಾವತಿಸಿಲು ಜೂನ್ 30 ಎಂದು ಇತ್ತು. ಈಗ ಜುಲೈ 15 ಕ್ಕೆ ವಿಸ್ತರಿಸಲಾಗಿದೆ, ಆದರೆ ವಿಮೆ ಮಾಡಿಸುವವರು ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ಖಾತೆ ತೆರೆದು ರೂಪೆ ಕಾರ್ಡ್ ನೀಡಬೇಕು ಎಂದು ಸಹಕಾರಿ ಸಂಘದಲ್ಲಿ ಹೇಳುತ್ತಿದ್ದಾರೆ. ನಾವು ಪಾವತಿಸಿದ ವಿಮಾ ಕಂತು ಅಪಲೋಡ್ ಆಗದೆ ನಮ್ಮ ಖಾತೆಗೆ ವಾಪಾಸ್ಸಾಗುತ್ತಿದೆ. ಯಾಕೆ ಹೀಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕ ಇಲಾಖಾ ಅಧಿಕಾರಿ ಬಸವರಾಜ್ ಕೆಲವೆಡೆ ಸರ್ವರ್ ಸಮಸ್ಯೆ ಇದೆ ಮುಂದೆ ಸರಿಯಾಗುತ್ತದೆ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಇದ್ದು, ರೂಪೇ ಕಾರ್ಡ್ ಹೊಂದಿದರೆ ಸಾಕು, ಈ ಬಗ್ಗೆ ಬ್ಯಾಂಕ್ಗಳಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದರು.

Also Read  ಮುಂಬೈನಿಂದ ಬಂದ ತೆಕ್ಕಟ್ಟೆ ವ್ಯಕ್ತಿ ಮೃತ್ಯು ➤ ಪತ್ನಿ ಮಗನಿಗೆ ಕೊರೋನಾ ಪಾಸಿಟಿವ್

 

 

error: Content is protected !!
Scroll to Top