(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.13. ಲಾಠಿ, ಗನ್ ಹಿಡಿಯುವ ಕೈಯಲ್ಲಿ ಪೆನ್ ಹಿಡಿದು ಅಕ್ಷರ ಪೋಣಿಸುವ ಅಭ್ಯಾಸ. ಗಂಭೀರತೆ, ಒತ್ತಡದ ವೃತ್ತಿ ಬದುಕಿನ ಜೊತೆಗೂ ಸಾಹಿತ್ಯ ರಚಿಸುವ ಹವ್ಯಾಸ. ವೃತ್ತಿಯೊಂದಿಗೆ ಸಾಹಿತ್ಯದ ಅಭಿರುಚಿ ಹೊಂದಿರುವವರೇ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪದವಿ ಓದುತ್ತಿರುವಾಗಲೇ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡವರು. ಶಿಕ್ಷಣ ಪೂರೈಸಿದ ಬಳಿಕ ಪೊಲೀಸ್ ಇಲಾಖೆಯಲ್ಲಿ ನೌಕರಿ ಪಡೆದ ಈರಯ್ಯರು 2014ರ ಬ್ಯಾಚ್ನಲ್ಲಿ ಪಿಎಸ್ಐ ಪರೀಕ್ಷೆ ಬರೆದು ಎಸ್ಐ ಆಗಿ ಭಡ್ತಿಗೊಂಡವರು. ತರಬೇತಿ ಬಳಿಕ ಬಂಟ್ವಾಳ ಪೊಲೀಸ್ ಠಾಣೆಗೆ ಪ್ರೊಬೇಷನರಿ ಎಸ್ಐ ಆಗಿ ನೇಮಕಗೊಂಡ ಈರಯ್ಯರು ಕಳೆದ ವರ್ಷ ಅಕ್ಟೋಬರ್ನಲ್ಲಿ ಪೂರ್ಣಪ್ರಮಾಣದ ಎಸ್ಐ ಆಗಿ ಬಂದಿದ್ದು ಬೆಳ್ಳಾರೆಗೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕು ಈರಯ್ಯ ಡಿ.ಎನ್. ಅವರ ಹುಟ್ಟೂರು. ಕೃಷಿ ಕುಟುಂಬದ ನಾಗಬೀರಯ್ಯ ಹಾಗೂ ಲಕ್ಷ್ಮಮ್ಮ ದಂಪತಿಯ ಎರಡನೇ ಪುತ್ರ ಈರಯ್ಯ. ಚಿಕ್ಕಂದಿನಲ್ಲೇ ಅಮ್ಮನ ಕಳೆದುಕೊಂಡ ಇವರು ಬೆಳೆದಿದ್ದು ಬೆಂಗಳೂರಿನ ಚಿಕ್ಕಪ್ಪನ ಮನೆಯಲ್ಲಿ. ಬೆಂಗಳೂರಿನ ವಿಜಯನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವರು ಓದುತ್ತಿರುವಾಗ ಕಾಲೇಜಿನ ವತಿಯಿಂದ ವಿಜಯ ವಿದ್ಯಾರ್ಥಿ ಎಂಬ ಪತ್ರಿಕೆ ಪ್ರಕಟವಾಗುತ್ತಿತ್ತು. ಅಲ್ಲಿನ ಉಪನ್ಯಾಸಕರು ಈರಯ್ಯರ ಬರವಣಿಗೆಯನ್ನು ಗಮನಿಸಿ, ಮೆಚ್ಚಿ ಆ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದ್ದರು. ಇದು ಈರಯ್ಯರ ಸಾಹಿತ್ಯ ಕೃಷಿಗೆ ಅಡಿಪಾಯ ಒದಗಿಸಿತು.
ನೂತನ ಪೊಲೀಸ್ ಠಾಣೆ ಬೆಳ್ಳಾರೆಗೆ ಪ್ರಥಮ ಎಸ್ಐ ಆಗಿ ಬಂದಿದ್ದು ಚೆಲುವಯ್ಯ. ಅವರು ವಗರ್ಾವಣೆಯಾದ ಬಳಿಕ ಆ ಸ್ಥಾನವನ್ನು ಅಲಂಕರಿಸಿದವರು ಈರಯ್ಯ. ಈರಯ್ಯ ಕರ್ತವ್ಯಕ್ಕೆ ಹಾಜರಾದ ಬಳಿಕ ಠಾಣೆಗೆ ಮತ್ತು ಕರ್ತವ್ಯ ಶೈಲಿಗೆ ಹೊಸತನದ ಮೆರುಗು ನೀಡಿದರು. ಖಡಕ್ ಆಫೀಸರ್ ಆಗಿ, ದಕ್ಷತೆ, ಪ್ರಾಮಾಣಿಕತೆ ಮೂಲಕ ಕಾರ್ಯನಿರ್ವಹಿಸಿ ಠಾಣೆಯ ಘನತೆ ಹೆಚ್ಚಿಸಿದರು. ತನ್ನ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುತೇಕ ಕಾನೂನು ಬಾಹಿರ ಚಟುವಟೆಕೆಗಳಿಗೆ ಕಡಿವಾಣ ಹಾಕಿದರು. ಇದಕ್ಕಾಗಿ ಹಗಲಿರುಳು ಶ್ರಮಿಸಿದರು. ಸಿಬ್ಬಂದಿ ವರ್ಗವೂ ಚುರುಕಿನಿಂದ ಕರ್ತವ್ಯ ನಿರ್ವಹಿಸುವಂತೆ ಮಾಡಿದಲ್ಲದೇ, ತಮ್ಮ ಇಲಾಖಾ ವ್ಯಾಪ್ತಿಯ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಸಾರ್ವಜನಿಕ ಸ್ನೇಹಿ ಎಸ್ಐ ಆಗಿಯೂ ಜನಮನ್ನಣೆ ಗಳಿಸಿದರು.
*ಪುಸ್ತಕ ಪ್ರೀತಿ
ಓದು, ಬರವಣಿಗೆ ಮೇಲಿರುವ ಅವರ ಪ್ರೀತಿ, ವ್ಯಕ್ತಿತ್ವದಲ್ಲೂ ಕಂಡುಬರುತ್ತದೆ. ಅಪರಾಧ, ಕಾನೂನು, ಸೆಕ್ಷನ್ಗಳ ಜಂಜಾಟದ ನಡುವೆ ಸಾಹಿತ್ಯ, ಸಮಾಜದ ಕುರಿತಾಗಿಗಿಯೂ ಮಾತು ಹೊರುಳುತ್ತದೆ. ಬಿಡುವಿನ ವೇಳೆಯಲ್ಲಿ ಕತೆ, ಕಾದಂಬರಿ, ಕವಿತೆಗಳನ್ನು ಓದುವ ಅವರು ನಿರ್ದಿಷ್ಟ ವಿಷಯದ ಮೇಲೆ ಪ್ರಬುದ್ಧರಾಗಿ ಮಾತನಾಡುತ್ತಾರೆ. ಅವರ ಭಾಷಾ ಪ್ರೌಢಿಮೆಯಲ್ಲೇ ಕವಿ ಹೃದಯ ಅನಾವರಣಗೊಳ್ಳುತ್ತದೆ. ಈರಯ್ಯರ ಕುಟುಂಬ ಅಂದರೆ ಪತ್ನಿ ಚಂಪಲತಾ, ಮಗ ಹಿತೈಷ್ ಬೆಂಗಳೂರಿನಲ್ಲೇ ವಾಸವಾಗಿರುವುದರಿಂದ ಬೆಳ್ಳಾರೆಯಲ್ಲಿರುವ ತಮ್ಮ ರೂಂ ಅನ್ನು ಸಣ್ಣ ಲೈಬ್ರೆರಿಯಾಗಿಯೇ ಪರಿವರ್ತಿಸಿರುತ್ತಾರೆ. ಆತ್ಮಕತೆಗಳೆಂದರೆ ನನಗೆ ಹೆಚ್ಚು ಇಷ್ಟ ಎನ್ನುವ ಈರಯ್ಯರು, ಕುವೆಂಪು, ಶಿವರಾಮ ಕಾರಂತರು, ಬೆಸಗರಹಳ್ಳಿ ರಾಮಣ್ಣರು, ಅಡಿಗರು, ದೇವನೂರು ಮಹಾದೇವ, ಕಯ್ಯಾರ ಕಿಂಞಣ್ಣ ರೈ, ಪೂರ್ಣಚಂದ್ರ ತೇಜಸ್ವಿ ನನ್ನಿಷ್ಟದ ಸಾಹಿತಿಗಳು, ಸಿದ್ದಲಿಂಗಯ್ಯ, ಎಸ್.ಎಲ್. ಬೈರಪ್ಪ, ಯಶವಂತ ಚಿತ್ತಾಲ, ಲಂಕೇಶ್, ಎಂ.ಆರ್. ಕಮಲಾ, ಪ್ರತಿಭಾ ನಂದಕುಮಾರ್ ಅವರ ಕೃತಿಗಳು ಇಷ್ಟ ಆಗುತ್ತವೆ ಎಂದು ಹೇಳುತ್ತಾರೆ.
ಈರಯ್ಯ ಉತ್ತಮ ಕಬಡ್ಡಿ ಆಟಗಾರರಾಗಿಯೂ ಗುರುತಿಸಿಕೊಂಡವರು. ಬೆಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸುತ್ತಿದ್ದರು. ಹಾಡು, ಭಾವಗೀತೆ ಕೇಳುವುದು ನನಗಿಷ್ಟ, ಒತ್ತಡ ನಿವಾರಣೆಗಾಗಿ ಹಾಡು ಕೇಳಿ ರಿಲ್ಯಾಕ್ಸ್ ಆಗುತ್ತೇನೆ ಎಂದು ಈರಯ್ಯ ಹೇಳುತ್ತಾರೆ.
ಪತ್ರಿಕೆಗಳಲ್ಲಿ ಈರಯ್ಯರ ಹಲವಾರು ಲೇಖನ, ಕೃತಿ, ಕವಿತೆಗಳು ಪ್ರಕಟಗೊಂಡಿವೆ. ಈರಯ್ಯ ದೂಂತೂರು, ಈರು ಮೊದಲಾದ ಹೆಸರಿನಲ್ಲಿ ಅವುಗಳು ಪ್ರಕಟವಾಗಿವೆ. ಈಗಲೂ ಕವನಗಳನ್ನು ಬರೆದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ, ಆತ್ಮೀಯರ ಪ್ರತಿಕ್ರಿಯೆ ನೋಡಿ ಅದರಲ್ಲೇ ತೃಪ್ತಿ ಕಾಣುತ್ತಾರೆ ಈರಯ್ಯ.
ಶಿವರಾಮ ಕಾರಂತರು ನಡೆದಾಡಿದ ನೆಲದಲ್ಲಿ ನಾನಿಂದು ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಅತೀವ ಹೆಮ್ಮೆ ಅನಿಸಿದೆ. ಕವಿತೆಗಳಲ್ಲಿ ವರ್ಣನೆ ಮಾಡುವಂತಹ ಸುಂದರ ವಾತಾವರಣ ದ.ಕ.ದಲ್ಲಿದೆ. ನಮ್ಮ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳಾದ ಧರಣಿದೇವಿ ಮಾಲಗತ್ತಿ, ದ.ಕ. ಜಿಲ್ಲಾ ಎಸ್ಪಿ ಡಾ. ರವಿಕಾಂತೇ ಗೌಡರು ಕೂಡ ಸಾಹಿತ್ಯದ ಕ್ಷೇತ್ರದಲ್ಲಿರುವ ಅಧಿಕಾರಿಗಳು ನನಗೆ ಪ್ರೇರಣೆ, ಸ್ಫೂರ್ತಿಯಾಗಿದ್ದಾರೆ.
ಈರಯ್ಯ ಡಿ.ಎನ್.
ಎಸ್ಐ, ಬೆಳ್ಳಾರೆ ಪೊಲೀಸ್ ಠಾಣೆ
ಅವರ ವ್ಯಾಟ್ಸಪ್ ಡಿಪಿಯಲ್ಲಿ ಕಂಡುಬಂದಿದ್ದು…
ನನ್ನ ಪಾಡಿಗೆ ನಾನಿರುತ್ತೇನೆ
ಬದಲಾಗಬೇಕಾದ
ಅನಿವಾರ್ಯತೆಯೂ ಇಲ್ಲ
ಅವಶ್ಯಕತೆಯೂ ಇಲ್ಲ
ಏನನ್ನೋ ಓದುತ್ತಾ…..
ಯಾವುದನ್ನೋ ಗೀಚುತ್ತಾ….
ನನ್ನನ್ನೇ ಹುಡುಕುತ್ತಾ….
ನೆನಪುಗಳನ್ನೇ ಧ್ಯಾನಿಸುತ್ತಾ…..