(ನ್ಯೂಸ್ ಕಡಬ) newskadaba.com ಕಡಬ, ಜೂ.13. ಗ್ರಾ.ಪಂ. ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸರಕಾರಿ ಸ್ಥಳದಲ್ಲಿ ಚುನಾವಣಾ ಸಂದರ್ಭದಲ್ಲಿ ರಾತೋ ರಾತ್ರಿ ವಾಹನ ಪಾರ್ಕಿಂಗ್ ಶೆಡ್ ನಿರ್ಮಿಸಿದ್ದಾರೆ ಎನ್ನುವ ಆರೋಪ, ಹೊಸಮಠ ಸಹಕಾರಿ ಸಂಘದವರು ಪಂಚಾಯತ್ಗೆ ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದಾರೆ ಎನ್ನುವ ಕಾರಣ ನೀಡಿ ಸಹಕಾರಿ ಸಂಘದ ಗೋಡಾನ್ ಪರವಾನಿಗೆ ನವೀಕರಿಸಲು ಪಿಡಿಒ ರವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಹಕಾರಿ ಸಂಘದ ಅಧ್ಯಕ್ಷರ ಆರೋಪ, ಹೊಸಮಠ ಬಸ್ ತಂಗುದಾನದಲ್ಲಿರುವ ಅಂಗಡಿ ಕೊಠಡಿಯೊಂದು ಬೆಂಕಿಗಾಹುತಿಯಾಗಿರುವ ಪ್ರಕರಣದ ಆರೋಪಿಗಳನ್ನು ತನಿಖೆ ಮಾಡದಿರುವ ಬಗ್ಗೆ ಪೋಲಿಸ್ ಸಿಬಂದ್ದಿ ಹಾಗೂ ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ, ಪಡಿತರ ಸಮಸ್ಯೆಯ ಬಗ್ಗೆ ಉತ್ತರಿಸಲು ಕಂದಾಯ ಮತ್ತು ಆಹಾರ ಇಲಾಖೆಯವರು ಸಭೆಗೆ ಗೈರು ಆಗಿರುವ ವಿಚಾರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿ ಗ್ರಾಮಸಭೆ ಮೊಟಕುಗೊಳಿಸಲು ಗ್ರಾಮಸ್ಥರ ಆಗ್ರಹ. ಮೊದಲಾದ ಹಲವು ವಿಚಾರಗಳ ಬಗ್ಗೆ ಬಾರಿ ಚರ್ಚೆ, ಮಾತಿನ ಚಕಮಕಿ ನಡೆದು ಗೊಂದಲಮಯವಾದ ಘಟನೆ ಕುಟ್ರುಪ್ಪಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿಯವರ ಅಧ್ಯಕ್ಷತೆಯಲ್ಲಿ ಜು.9ರಂದು ಕುಟ್ರುಪಾಡಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಪುತ್ತೂರು ಬಿ.ಆರ್.ಪಿ ಸವಿತಾ ಗುಜರಾನ್ ಚರ್ಚೆ ನಿಯಂತ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ,ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯರಾದ ಶಿವಪ್ರಸಾದ್ ಪುತ್ತಿಲ, ಮಹಮ್ಮದಾಲಿ, ದೇವಯ್ಯ ಗೌಡ ಪನ್ಯಾಡಿ,ಶಿವಪ್ರಸಾದ್ ರೈ ಮೈಲೇರಿ, ಬಿನೋಜ್, ತನಿಯಪ್ಪ ಸಂಪಡ್ಕ, ಸೂಸಮ್ಮ, ವಿದ್ಯಾಗೋಗಟೆ, ಕುಸುಮಾವತಿ, ಭಾರತಿ, ಗೀತಾ.ಪಿ, ಶೋಭಾ ಅನಿಲ್, ಯಶೋದಾ ಉಪಸ್ಥಿತರಿದ್ದರು. ಸಭೆಗೆ ಮಹಿಳಾ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಸತ್ಯನಾರಾಯಣ, ಕಿರಿಯ ಇಂಜಿನಿಯರ್ ಗೌತಮ್.ಎಸ್, ಸಹಾಯಕ ತೋಟಗಾರಿಕಾ ಅಧಿಕಾರಿ ಬಸವರಾಜು, ಕೃಷಿ ಅಧಿಕಾರಿ ತಿಮ್ಮಪ್ಪ, ಕಡಬ ಪೋಲಿಸ್ ಉಪನಿರೀಕ್ಷಕ ಪ್ರಕಾಶ್.ಕೆ, ಬೀಟ್ ಪೋಲಿಸ್ ಚಂದ್ರಿಕಾ, ಉಪ ವಲಯ ಅರಣ್ಯಧಿಕಾರಿ ಸಂತೋಷ್.ವೈ, ಕ್ಲಸ್ಟರ್ ಮುಖ್ಯಸ್ಥ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಡಬ ಮೇಲ್ವಿಚಾರಕಿ ಹೇಮರಾಮದಾಸ್, ಎನ್.ಆರ್.ಇ.ಜಿ,ಯ ಸವಿತಾ ಲೊಲನೊ, ಪಶುವೈದ್ಯಕೀಯ ಪರಿವೀಕ್ಷಕ ರವೀಂದ್ರ, ಜಿ.ಪಂ.ಸಹಾಯಕ ಇಂಜಿನೀಯರ್ ಭರತ್ ಬಿ.ಎಂ. ಆರೋಗ್ಯ ಸಹಾಯಕಿ ರಾಜೇಶ್ವರಿರವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು. ಗುಮಾಸ್ತ ಜಿತೇಶ್ ಕುಮಾರ್ ವರದಿ ಮಂಡಿಸಿದರು. ಸಿಬಂದಿಗಳಾದ ಅಂಗು ಮುಗೇರ, ಉಮೆಶ್.ಬಿ, ಜನಾರ್ಧನ ಎಸ್ ಸಹಕರಿಸಿದರು.
ದೀನ್ ದಯಾಳ್ ವಿದ್ಯುತ್ ಸಂಪರ್ಕ ಯೋಜನೆಯಡಿಯಲ್ಲಿ
ವಿದ್ಯುತ್ ಕಾಮಗಾರಿ ವಿಳಂಬ-ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
ದೀನ್ ದಯಾಳ್ ಯೋಜನೆಯಡಿಯಲ್ಲಿ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಉದ್ಯೋಗ ಖಾತರಿ ದುಡ್ಡು ಇನ್ನೂ ಬಂದಿಲ್ಲ-ಸತ್ಯನ್ ಆರೋಪ
ಗ್ರಾಮಸ್ಥ ಸತ್ಯನ್ ಎಂಬವರು ಮಾತನಾಡಿ, 2017ರಲ್ಲಿ ಕೋಳಿ ಸಾಕಾಣೆ ಸಂಬಂಧಿಸಿ ಉದ್ಯೋಗ ಖಾತರಿ ಯೋಜನೆಯಲ್ಲಿ ದಾಖಲೆಗಳನ್ನು ಸಲ್ಲಿಸಿದ್ದರೂ ಈವರೆಗೆ ದುಡ್ಡು ಬಂದಿಲ್ಲ, ಈ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರನ್ನು ಕೇಳಿದರೆ ಜಿ.ಪಿ.ಎಸ್. ಆಗಿಲ್ಲ ಎಂದು ಹೇಳುತ್ತಾರೆ, ಜಿ.ಪಿ.ಎಸ್. ಯಾರು ಮಾಡುವುದು ನಾನು ಮಾಡುವುದು ಅಲ್ಲ, ಈ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ್ದು, ಈ ಬಗ್ಗೆ ಸರಿ ಮಾಡುವ ಎಂದು ಜಿ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು ಭರವಸೆ ನೀಡಿದ್ದರು, ಇದುವರೆಗೆ ನನಗೆ ಹಣ ಬಂದಿಲ್ಲ ಎಂದು ಸತ್ಯನ್ ಹೇಳಿದರು.ಇವರಿಗೆ ಅನ್ಯಾಯ ಆಗಿರುವುದು ನಿಜ ಎಂದು ಗ್ರಾ.ಪಂ. ಸದಸ್ಯ ಮಹಮ್ಮದಾಲಿ ಈ ಸಂದರ್ಭದಲ್ಲಿ ಹೇಳಿದರು. ಈ ಬಗ್ಗೆ ಉತ್ತರಿಸಿದ ಪಿಡಿಒರವರು ನಿಮಗೆ ಉದ್ಯೋಗಖಾತರಿಯಲ್ಲಿ ಏನಾದರೂ ಸಮಸ್ಯೆಯಾದಲ್ಲಿ ಉದ್ಯೋಗ ಖಾತರಿ ಕಸ್ಟಮರ್ ಕ್ಯಾರ್ ನಂ ಇದೆ ಅದಕ್ಕೆ ಮಾಡಿ, ಇಲ್ಲದಿದ್ದರೆ ಉದ್ಯೋಗ ಖಾತರಿ ಓಂಬುಡ್ಸ್ಮೆನ್ ಗಳಿದ್ದಾರೆ ಅವರಲ್ಲಿ ಕೇಳಿ ಉತ್ತರಿಸಿದರು, ಬಳಿಕ ಸತ್ಯನ್ ನಾನು ಇನ್ನು ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿಯವರ “ಶಾಲಾ ರಜೆ” ಆದೇಶಕ್ಕೆ
ಕ್ಯಾರೆ ಅನ್ನದ ಕಡಬದ ಖಾಸಗಿ ಶಾಲೆ
ಜು.9ರಂದು ವಿಪರಿತ ಮಳೆ ಇದ್ದು ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತಾದರೂ ಕಡಬದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದು ವಿದ್ಯಾರ್ಥಿಗಳಿಗೆ ರಜೆ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ಈ ಬಗ್ಗೆ ಕುಟ್ರುಪಾಡಿ ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿದ್ದ ಬಿ.ಆರ್.ಪಿ. ಸವಿತಾ ಗುಜರಾನ್ರವರಲ್ಲಿ ಗ್ರಾಮಸ್ಥರು ಪ್ರಶ್ನಿಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಶಾಲಾ ಆಡಳಿತ ಮಂಡಳಿಯ ವಿರುದ್ದ ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿಯವರ ಆದೇಶಕ್ಕೆ ಬೆಲೆ ನೀಡಲಿಲ್ಲವಾದರೆ ಇನ್ನೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸವಿತಾ ಗುಜರನ್ ರಜೆ ನೀಡದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ, ನಾವು ಈ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಯವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಮುಖ ವಿಷಯಗಳು:
*14ನೇ ಹಣಕಾಸು ಯೋಜನೆಯಲ್ಲಿ ಕುಟ್ರುಪಾಡಿ ಚೆವುಡೇಲು-ಮಠದಬೈಲು ಖಾಸಗಿ ರಸ್ತೆಗೆ ಅನುದಾನ ನೀಡಿರುವುದಕ್ಕೆ ಕ್ಷೇವಿಯರ್ ಬೇಬಿ ಆಕ್ಷೇಪ ವ್ಯಕ್ತಪಡಿಸಿದರು.
*ಗ್ರಾಮಸಭೆಯಲ್ಲಿ ಆಗಿರುವ ನಿರ್ಣಯವನ್ನು ಅಂದೇ ದಾಖಲಿಸಿ ನೋಡೆಲ್ ಅಧಿಕಾರಿಯವರು ಸಹಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು
*ಬಜೆತ್ತಡ್ಕದಲಿ ಐದು ವರ್ಷ ಕಳೆದರೂ ನಿವೇಶನ ಹಂಚಿಕೆಯಾಗದಿರುವುದಕ್ಕೆ ಆಕ್ಷೇಪ
*ಚೇವುಡೇಲು ಕಾಲೋನಿಯಲ್ಲಿ ಕೊಳವೆ ಬಾವಿ ಅಪಾಯದ ಸ್ಥಿತಿಯಲ್ಲಿದ್ದರೂ ಮುಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
*ಕಡಬ ಪಶುವೈದ್ಯಕೀಯ ಆಸ್ಪತ್ರೆಗೆ ಇನ್ನೊರ್ವ ಪಶು ವೈದ್ಯರನ್ನು ನೇಮಕಗೊಳಿಸುವಂತೆ ಆಗ್ರಹ
*ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಸಲಕರಣೆಗಳು ಹಾಗೂ ವೈದ್ಯಾಧಿಕಾರಿಯವರನ್ನು ನೇಮಕಗೊಳಿಸುವಂತೆ ಆಗ್ರಹ