(ನ್ಯೂಸ್ ಕಡಬ) newskadaba.com ಉಡುಪಿ, ಜು.12. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೂ ವಿಸ್ತರಿಸುವ ಉದ್ದೇಶದಿಂದ ಗುರುವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಂದಿನಿ ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ (500 ಮಿ.ಲೀ, 1ಲೀ, 6ಲೀ) ನಂದಿನಿ ಹಾಲಿನ ಪ್ಯಾಕೆಟ್‌ನೊಂದಿಗೆ 90 ದಿನಗಳ ಕಾಲ ಬಾಳಿಕೆ ಬರುವ 180 ಮಿ.ಲೀ. ನಂದಿನಿ ತೃಪ್ತಿ ಹಾಲಿನ ಒಂದು ಪ್ಯಾಕೆಟ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಮಣಿಪಾಲದ ಕೆಎಂಎಫ್ ಡೇರಿಯಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಸದ್ಭಳಕೆಗಾಗಿ ಒಕ್ಕೂಟ ಗ್ರಾಹಕ ಸ್ನೇಹಿ ಯೋಜನೆ ರೂಪಿಸಿದ್ದು, ನಂದಿನಿ ಗ್ರಾಹಕರಿಗೆ ಅಂದಾಜು 62 ಲಕ್ಷ ರೂ ಮೌಲ್ಯದ ತೃಪ್ತಿ ಹಾಲನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದರು. ಎಲ್ಲಾ ಡೀಲರ್‌ಗಳಿಗೆ ಸಹ ಉಚಿತ ಹಾಲು ವಿತರಣೆ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಗತ್ಯವಿರುವ ಒಟ್ಟು 6.5 ಲಕ್ಷ ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ಗಳನ್ನು ಸಿದ್ದಪಡಿಸಲಾಗಿದೆ. ಗ್ರಾಹಕರಿಗೆ ಸಮರ್ಪಕ ರೀತಿಯಲ್ಲಿ ಈ ಹಾಲು ವಿತರಣೆಯಾಗುವುದನ್ನು ಪರಿಶೀಲಿಸಲು ಉಸ್ತುವಾರಿ ತಂಡಗಳನ್ನು ಸಹ ರಚಿಸಲಾಗಿದೆ. ಒಟ್ಚಿನಲ್ಲಿ ಗ್ರಾಹಕರಿಗೆ ಯಾವುದೇ ಲೋಪವಾಗದಂತೆ ಎಲ್ಲರಿಗೂ ಪ್ರಯೋಜನ ದೊರಕಿಸಿಕೊಡಲು ಉದ್ದೇಶಿಸಲಾಗಿದೆ ಎಂದು ರವಿರಾಜ್ ಹೆಗ್ಡೆ ನುಡಿದರು.