(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.11. ಸರಕಾರಿ ದಾಖಲೆಯಲ್ಲಿ ಇದು ನಮೂದಿಸಲ್ಪಟ್ಟ ಪರಂಬೋಕು ತೋಡು. ತೋಡು ತಿರುಗಿಸಿ ಬಡ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪಕ್ಕದ ಜಮೀನಿನ ಭೂ ಮಾಲೀಕ. ಇರುವ 40 ಸೆಂಟ್ಸ್ ಸ್ಥಳವೂ ತೋಡು ತಿರುವಿನಿಂದ ಕುಸಿಯುವ ಭೀತಿಯಲ್ಲಿ ಏಕನಾಥ ಭಟ್ಟರ ಕುಟುಂಬ. ಕಂದಾಯ ಇಲಾಖೆ, ಮಾಜಿ ಶಾಸಕರಿಗೆ, ಗ್ರಾ.ಪಂ, ಹಾಲಿ ಶಾಸಕರಿಗೆ, ಪೊಲೀಸ್ ಠಾಣೆಗೆ 2 ವರ್ಷಗಳಿಂದ ದೂರು ನೀಡಲಾಗುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಬೇಸತ್ತು ದಯಾಮರಣಕ್ಕಾಗಿ ಅನುಮತಿ ನೀಡುವಂತೆ ಮನವಿ ಸಲ್ಲಿಸಲು ತಯಾರಿ.ಕೊನೆಯದಾಗಿ ಮಾಧ್ಯಮಗಳ ಮೊರೆ ಹೋದ ಭಟ್ಟರು. ಇವಿಷ್ಟು ಪಟ್ರಮೆಯ ಕಲ್ಕೊಡಂಗೆ ನಿವಾಸಿ ಏಕನಾಥ ಭಟ್ಟರ ಕುಟುಂಬದ ಸಂಕಷ್ಟದ ಕಥೆ.
ಕಳೆದ 25 ವರ್ಷಗಳಿಂದ ಪಟ್ರಮೆ ಗ್ರಾಮದ ಕಲ್ಕೊಡಂಗೆ ಎಂಬಲ್ಲಿ 40 ಸೆಂಟ್ಸ್ ಸರಕಾರೀ ಭೂಮಿಯಲ್ಲಿ ಏಕನಾಥ ಭಟ್ ಕುಟುಂಬ ಕೃಷಿಯನ್ನು ಮಾಡುತ್ತಾ ಬದುಕುತ್ತಿದ್ದಾರೆ. ಅದೂ ಕೂಡಾ ಇಳಿಜಾರು ಪ್ರದೇಶ. ಕಳೆದ 4 ವರ್ಷಗಳ ಹಿಂದೆ ಭಟ್ಟರ ಜಮೀನಿನ ಪಕ್ಕದ ಸ್ಥಳವನ್ನು ಖಾಸಗಿ ವ್ಯಕ್ತಿಯೊಬ್ಬರು ಖರೀದಿಸಿದ ಘಟನೆಯ ನಂತರ ಜಮೀನಿನ ಅನತಿ ದೂರದಲ್ಲಿರುವ ಪರಂಬೋಕು ತೋಡನ್ನು ಭಟ್ಟರ ಜಮೀನಿಗೆ ತಿರುಗಿಸಿದ ಪರಿಣಾಮ ಇಳಿಜಾರು ಪ್ರದೇಶದಲ್ಲಿರುವ ಕೃಷಿ ಹಾನಿಗೆ ಒಳಗಾಗುತ್ತಾ ಇದೆ. ಇದೀಗ ಕೃಷಿ ಹಾನಿಯ ಜೊತೆಗೆ ಮನೆ, ಕೊಟ್ಟಿಗೆ ಕೂಡಾ ಕುಸಿಯುವ ಭೀತಿಗೆ ಒಳಗಾಗಿರುವುದು ಸಂತ್ರಸ್ತ ಕುಟುಂಬದ ಆತಂಕಕ್ಕೆ ಕಾರಣವಾಗಿದೆ. ಕುಡಿಯಲು ಬಾವಿ ತೆಗೆಯಲೂ ಸಾಧ್ಯವಿಲ್ಲದ ಗುಡ್ಡದ ಪ್ರದೇಶದಲ್ಲಿರುವ ಬಡಕುಟುಂಬ ಜಮೀನಿನ ಪಕ್ಕ ಇರುವ ಬಂಡೆಕಲ್ಲಿನ ಒರತೆಯಿಂದ ಬರುವ ನೀರನ್ನು ಹಿಂದಿನಿಂದಲೂ ಕುಡಿಯುವ ಹಾಗೂ ಇತರೆ ಉದ್ದೇಶಕ್ಕೆ ಬಳಸುತ್ತಿದ್ದರೂ ಇದೀಗ ಅದಕ್ಕೂ ಬೆದರಿಕೆ ಒಡ್ಡುತ್ತಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ಎಲ್ಲಾ ಸ್ಥಳವೂ ನ್ನದೇ ಎಂದು ಬೆದರಿಕೆ ಹಾಕುತ್ತಿರುವುದರಿಂದ ಭಟ್ಟರು ಕಂಗಾಲಾಗಿದ್ದಾರೆ. ಇಷ್ಟೇ ಅಲ್ಲದೇ ಹಿಂದಿನಿಂದಲೂ ಸಾರ್ವಜನಿಕರು ಬಳಸುತ್ತಿದ್ದ ಕಾಲುದಾರಿಯನ್ನು ಕೂಡಾ ಪಕ್ಕದ ಜಮೀನು ಖರೀದಿಸಿದ ವ್ಯಕ್ತಿ ಬಂದ್ ಮಾಡಿ ರಬ್ಬರ್ ಗಿಡಗಳನ್ನು ನಾಟಿ ಮಾಡಿರುವುದರಿಂದ ಇದ್ದ ಒಂದು ಕಾಲುದಾರಿಯೂ ಇಲ್ಲದಂತಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಅಭಿವೃದ್ದಿ ಅಧಿಕಾರಿಗೆ, ತಾಲೂಕು ಪಂಚಾಯತ್ ಸದಸ್ಯರಿಗೆ, ಜಿಲ್ಲಾ ಪಂಚಾಯತ್ ಸದಸ್ಯರು, ಹೀಗೆ ಎಲ್ಲರಿಗೂ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಹಲವಾರು ಎಕರೆ ಸರಕಾರಿ ಭೂಮಿ ಹೊಂದಿರುವ ವ್ಯಕ್ತಿಯಿಂದ ಈ ಬಡ ಕುಟುಂಬಕ್ಕೆ ಇಷ್ಟೆಲ್ಲಾ ಬೆದರಿಕೆಗಳು ಬಂದರೂ ಯಾರೂ ನೆರವಿಗೆ ಬರುತ್ತಿಲ್ಲವೆನ್ನುವ ಕೊರಗಿನಲ್ಲಿ ತಾಲೂಕು ದಂಡಾಧಿಕಾರಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದೆ. ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ನ್ಯಾಯ ಒದಗಿಸುವರೇ ಕಾದುನೋಡಬೇಕಷ್ಟೆ.
25 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದು ಕಳೆದ 4 ವರ್ಷಗಳ ಹಿಂದೆ ಪಕ್ಕದ ಜಮೀನು ಖರೀದಿಸಿದ ವ್ಯಕ್ತಿಗಳಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. 2 ವರ್ಷಗಳಿಂದ ಕಂದಾಯ ಅಧಿಕಾರಿಗಳು ಹಾಗೂ ಹಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿಯೂ ನ್ಯಾಯ ದೊರೆತಿಲ್ಲ. ಈಯೆಲ್ಲಾ ಕಿರುಕುಳಗಳಿಂದ ಬೇಸತ್ತು ಬೇರಾವುದೇ ದಾರಿ ಕಾಣದೇ ತಾಲೂಕು ದಂಡಾಧಿಕಾರಿಯವರಲ್ಲಿ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಲಿದ್ದೇನೆ.
2 ವರ್ಷಗಳ ಹಿಂದೆ ಎಕನಾಥ ಭಟ್ ರವರು ತಮ್ಮ ಜಮೀನಿನ ಪಕ್ಕ ತೋಡು ತಿರುಗಿಸಿದ್ದರಿಂದ ಕೃಷಿಗೆ ಹಾನಿಯಾಗುತ್ತಿದೆ ಅನ್ನುವ ದೂರಿನ ಪರಿಶೀಲನೆಗಾಗಿ ತಾವು ಮಾತ್ರವಲ್ಲದೇ ಜಿ.ಪಂ.ಸದಸ್ಯರು, ಗ್ರಾ.ಪಂ. ಪಿ.ಡಿ.ಒ ಸಹಿತ ಭೇಟಿ ನೀಡಿ ತೋಡನ್ನು ತಿರುಗಿಸಿದ ವ್ಯಕ್ತಿಗೆ ದಾಖಲೆಯಲ್ಲಿರುವ ತೋಡನ್ನು ತಿರುಗಿಸುವುದು ಕಾನೂನಿಗೆ ವಿರುದ್ದ ವೆಂದು ಮನವರಿಕೆ ಮಾಡಿ ತೋಡನ್ನು ಹಿಂದೆ ಇದ್ದ ಹಾಗೆಯೇ ಮಾಡಿಕೊಡುವಂತೆ ಮನವಿ ಮಾಡಿದ್ದೆವು. ನಂತರ ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳಿಗೂ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ಇದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ತಕ್ಷಣ ಇಲಾಖಾಧಿಕಾರಿಗಳು ಬಡಕುಟುಂಬಕ್ಕೆ ನ್ಯಾಯ ಒದಗಿಸಬೇಕು.
-ನವೀನ್: ಅಧ್ಯಕ್ಷರು ಗ್ರಾ.ಪಂ.ಪಟ್ರಮೆ.