ಪುಣ್ಯ ಕ್ಷೇತ್ರ ಸಂಪರ್ಕಿಸುವ ರಸ್ತೆಯಾಗಿದ್ದರೂ ಕೇಳುವವರಿಲ್ಲ, ನೋಡುವವರಿಲ್ಲ
(ನ್ಯೂಸ್ ಕಡಬ) newskadaba.com,ಕಡಬ.ಜೂ.11. ಉಪ್ಪಿನಂಗಡಿ- ಕಡಬ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿಂದ ಟಿಸಿಲೊಡೆದ ಬೀರಂತಡ್ಕ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ.
ಕುಂತೂರು ಪದವಿನ ಮುರ ಚಡಾವು ಎಂಬಲ್ಲಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 2.5 ಕಿ.ಮೀ.ಉದ್ದವಿದೆ. ಕುಂತೂರು ಪದವಿನಿಂದ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡರ ಮನೆ ಹಿಂದುಗಡೆಯಿಂದ ಹಾದು ಹೋಗುವ ರಸ್ತೆಯು ಕುಂಡಡ್ಕ ಎಂಬಲ್ಲಿ ಸಂಪರ್ಕಿಸುತ್ತಿದೆ. ಪೆರಾಬೆ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಈ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು ಕುಂಡಡ್ಕದಿಂದ ಮುಂದೆ ಕೆಸರುಮಯಗೊಂಡಿದೆ.
ಪ್ರಸಿದ್ದ ಕಾರುಣಿಕ ಕ್ಷೇತ್ರ ಐತಿಹ್ಯಯುಲ್ಲ ಯಕ್ಷ ಪಾಂಡವರ ಕೆರೆ, ಅಲ್ಲದೆ ಎರಡು ತಿಂಗಳ ಹಿಂದೆ ಇಲ್ಲಿನ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ರಾಜನ್ ದೈವಸ್ಥಾನ ಕ್ಕೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಅಭಿವೃದ್ಧಿಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಆದರೆ ಯಾರೂ ಸ್ಪಂದಿಸಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಕೆಲಕಡೆ ರಸ್ತೆ ಅಗಲೀಕರಣಕ್ಕೂ ಸ್ಥಳೀಯರು ತಮ್ಮ ಸ್ವಾಧೀನದಲ್ಲಿರುವ ಜಾಗ ಬಿಟ್ಟುಕೊಡುವುದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಕೃಷಿಕರೇ ಹೆಚ್ಚಿರುವ ಈ ಭಾಗದಲ್ಲಿ ಕೃಷಿಕರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಪೇಟೆ, ಪಟ್ಟಣಗಳಿಗೆ ಕೊಂಡುಹೋಗಲು ಇದೇ ರಸ್ತೆ ಉಪಯೋಗಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವ ಈ ಭಾಗದ ವಿದ್ಯಾರ್ಥಿಗಳಿಗೂ ಇದೊಂದೆ ರಸ್ತೆಯಾಗಿದೆ. ದಿನನಿತ್ಯ ಪೇಟೆಗೆ ಉದ್ಯೋಗಕ್ಕೆ ತೆರಳುವವ ವಾಹನ ಸವಾರರು ಹೊಂಡ ಕೆಸರುಮಯ ರಸ್ತೆಯಲ್ಲಿ ಎದ್ದು ಬಿದ್ದು ಹೋಗಬೇಕಾಗಿದೆ.
* ಸೇತುವೆಗೆ ಮನವಿ:
ಕಡಬದಿಂದ ಪದವು-ಬೀರಂತಡ್ಕ-ಅಭಿಕಾರ-ದೋಲ್ಪಾಡಿ ಮೂಲಕ ಕಾಣಿಯೂರು, ಪುತ್ತೂರು ಸಂಪರ್ಕವೂ ಈ ರಸ್ತೆ ಮೂಲಕ ಸಾಧ್ಯವಿದೆ. ಆದರೆ ರಸ್ತೆ ಸಂಪರ್ಕಕ್ಕೆ ಬೀರಂತಡ್ಕದಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣವಾಗಬೇಕಾಗಿದೆ. ಕಾಲಕ್ರಮೇಣ ಇಲ್ಲಿ ಸೇತುವೆ ನಿರ್ಮಾಣಗೊಂಡು ಅಭಿವೃದ್ಧಿಯಾಗಬಹುದೆಂಬ ನಿರೀಕ್ಷೆಯಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರವರಿಗೆ ಇಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಮನವಿ ಸಹ ಸಲ್ಲಿಸಲಾಗಿದೆ.
ಸೇತುವೆ ನಿರ್ಮಾಣವಾಗಿ ಈ ರಸ್ತೆ ಅಭಿವೃದ್ಧಿಗೊಂಡಲ್ಲಿ ಊರ ಪರವೂರ ಭಕ್ತಾಧಿಗಳಿಗೆ ಪ್ರಸಿದ್ಧ ದೇವಸ್ಥಾನ, ದೈವಸ್ಥಾನ ಸಂಪರ್ಕಿಸಲು ಅತೀ ಹತ್ತಿರದ ರಸ್ತೆ ಇದಾಗಬಹುದು. ಇದರಿಂದ ಕ್ಷೇತ್ರವೂ ಅಭಿವೃದ್ಧಿ ಹೊಂದಲಿದೆ ಎಂಬುದು ಊರಿನವರ ಅಭಿಪ್ರಾಯವಾಗಿದೆ.
* ಯಾದವ ಬೀರಂತಡ್ಕ, ಸ್ಥಳಿಯರು.
ಚುನಾವಣಾ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಆದರೆ ಚುನಾವಣೆ ಕಳೆದ ಬಳಿಕ ಭರವಸೆ ಈಡೇರಿಸಲು ಒಂದೊಂದು ಕಾರಣ ನೀಡುತ್ತಿರುವ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಬಗ್ಗೆ ಚಿಂತೆಯೇ ಇರುವುದಿಲ್ಲ. ತಕ್ಷಣ ರಸ್ತೆಯನ್ನು ಸುಸಜ್ಜಿತಗೊಳಿಸಬೇಕು. ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ರಾಜನ್ ದೈವಸ್ಥಾನ ಬೀರಂತಡ್ಕ.