(ನ್ಯೂಸ್ ಕಡಬ) newskadaba.com,ಕಡಬ,ಜೂ.11. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಜೀವನ ಮೌಲ್ಯವನ್ನು ನೀಡಿ ಭಾರತೀಯ ಸಂಸ್ಕೃತಿ ಭೋಧಿಸಿ ಸದೃಢ ರಾಷ್ಟ್ರ ನಿರ್ಮಣ ಮಾಡುವುದು ವಿದ್ಯಾಸಂಸ್ಥೆಗಳ ಗುರಿಯಾಗಬೇಕು ಎಂದು ಉಡುಪಿ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಭಾನುವಾರ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಪೋಷಕರ ಸಮಾವೇಶದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವಚನ ನೀಡುತ್ತಿದ್ದರು.
ಗ್ರಾಮೀಣ ಪ್ರದೇಶದ ವಿಭಿನ್ನ ಸಂಸ್ಸೃತಿಯ ವಿದ್ಯಾರ್ಥಿಗಳನ್ನು ಸೇರಿಸಕೊಂಡು ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರವಂತರನ್ನಾಗಿಸುವ ಮಹತ್ತರ ಉದ್ದೇಶವನ್ನು ಇಟ್ಟುಕೊಂಡು ನಾಡು ಕಟ್ಟುವ ಪ್ರಜೆಗಳನ್ನು ಸಮಾಜಕ್ಕೆ ಅರ್ಪಿಸಬೇಕು ಎನ್ನುವುದು ಪ್ಭೆಜಾವರಶ್ರೀ ಆಶಯವಾಗಿದ್ದು, ಅದನ್ನು ಇಲ್ಲಿನ ಆಂಗ್ಲ ಮಾಧ್ಯಮ ಶಾಲೆ ಈಡೇರಿಸುತ್ತಿದೆ, ಈ ಸಂಸ್ಥೆಯಿಂದ ಹೊರ ಹೊಮ್ಮಿದ ವಿದ್ಯಾರ್ಥಿಗಳಿಗೆ ಎಲ್ಲೇ ಹೋದರೂ ವಿಶೇಷ ಗೌರವ ಸಿಗುವಂತಾಗಿದ್ದರೆ ಅದರ ಹಿಂದೆ ಇಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಅಪಾರ ಶ್ರಮವಿದೆ, ಇಲ್ಲಿ ಕಡಿಮೆ ಅಂಕದ ವಿದ್ಯಾರ್ಥಿಗಳನ್ನು ಸೇರಿಸಕೊಂಡು ಗರಿಷ್ಟ ಅಂಕಗಳಿಸುವಂತೆ ಮಾಡುವುದು ವಿಶೇಷವಾಗಿದೆ ಎಂದು ಹೇಳಿದ ಸ್ವಾಮೀಜಿ ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್, ಟಿವಿ ಗಳಿಂದ ದೂರವಿದ್ದು ಶಿಕ್ಷಣವೊಂದೇ ಧ್ಯೇಯವಾಗಿಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ 54 ವಿದ್ಯಾರ್ಥಿಗಳನ್ನು ಸ್ವಾಮೀಜಿಯವರು ಸನ್ಮಾನಿಸಿದರು. ವೇದಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ|ಸಂಕೀರ್ತ್ ಹೆಬ್ಬಾರ್, ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಎಂ.ಸತೀಶ್ ಭಟ್, ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ ಉಪಸ್ಥಿತರಿದ್ದರು.
ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಪ್ರಸ್ತಾವನೆಗೈದರು. ಮುಖ್ಯಗುರು ಗಾಯತ್ರಿ ಸ್ವಾಗತಿಸಿದರು. ವಸತಿನಿಲಯದ ಮೇಲ್ವಚಾರಕ ರಮೇಶ್ ರೈ ವಂದಿಸಿದರು. ಶಿಕ್ಷಕ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.