ಕಲ್ಲುಗುಡ್ಡೆಯಲ್ಲಿ ಯಾವುದೇ ಕಾರಣಕ್ಕೆ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ: ಗ್ರಾಮಸ್ಥರಿಂದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಯಾವುದೇ ಕಾರಣಕ್ಕೆ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮ ಪರಿಸರದಲ್ಲಿ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ. ನಮ್ಮ ನೆಮ್ಮದಿಯನ್ನು ಕಸಿದುಕೊಳ್ಳಲು ಯಾರೂ ಬರಬೇಡಿ. ಬಂದರೆ ಎಷ್ಟೇ ಶ್ರೀಮಂತನಾಗಿರಲಿ ಬಿಡುವುದಿಲ್ಲ. ಒಬ್ಬರ ಜೀವನಕ್ಕಾಗಿ ಇಡೀ ಊರಿನ ಸ್ವಾಸ್ಥ್ಯ ಕೆಡಿಸಲು ನಾವು ಬಿಡುವುದಿಲ್ಲ ಎಂದು ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪರಿಶಿಷ್ಟ ಕಾಲೋನಿ ಬಳಿಯಲ್ಲಿ ಮದ್ಯದಂಗಡಿ ತೆರೆಯಲಿದೆ ಎಂಬ ವ್ಯಾಪಕ ಪ್ರಚಾರದ ಹಿನ್ನೆಲೆಯಲ್ಲಿ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮಸ್ಥರು ಸೇರಿ ಜು. 15 ರಂದು ಪ್ರತಿಭಟನೆ ನಡೆಸಿ ಈ ಎಚ್ಚರಿಕೆ ನೀಡಿದ್ದಾರೆ. ಸಭೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಉಳಿಪ್ಪುರವರ ಅಧ್ಯಕ್ಷತೆಯಲ್ಲಿ ನೂಜಿಬಾಳ್ತಿಲ ಶಾಲಾ ಸಭಾಂಗಣದಲ್ಲಿ ನಡೆಯಿತು. ರೆಂಜಿಲಾಡಿ ಬೀಡುವಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಮಾತನಾಡಿ ‘ಧರ್ಮಸ್ಥಳದ ಧರ್ಮಾಧಿಕಾರಿಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಮ್ಮ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮಗಳನ್ನು ಮದ್ಯಮುಕ್ತ ಗ್ರಾಮವನ್ನಾಗಿಸಿ ಅಭಿವೃದ್ಧಿ ಹೊಂದಿದ ಗ್ರಾಮವಾಗಿ ಪರಿವರ್ತಿತಗೊಂಡಿದೆ. ಇದೀಗ ಮದ್ಯದಂಗಡಿ ತೆರೆಯುವ ಮೂಲಕ ಮತ್ತೆ ಜನರು ನೆಮ್ಮದಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಮುಂಚೆ ನಾವು ಎಚ್ಚೆತ್ತುಕೊಂಡು ನಮ್ಮ ಗ್ರಾಮಕ್ಕೆ ಮದ್ಯದಂಗಡಿ ಬಾರದಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.
ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ‘ನೂಜಿಬಾಳ್ತಿಲದಲ್ಲಿ ಬಾರ್ ತೆರೆಯಲಿದೆ ಎಂದು ಮಾಧ್ಯಮದ ಮೂಲಕ ತಿಳಿದಿದ್ದೇವೆ. ಆದರೆ ಇಲ್ಲಿಯವರೆಗೆ ಈ ಬಗ್ಗೆ ಪಂಚಾಯತ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ಉದನೆಯಲ್ಲಿ ಬಂದ್ ಆದ ಬಾರ್ ಪುತ್ತಿಗೆಯಲ್ಲಿ ತೆರೆಯಲು ಅಲ್ಲಿನವರು ಬಿಟ್ಟಿಲ್ಲ, ಕೊಣಾಜೆಯಲ್ಲೂ ಜನರು ಬಿಟ್ಟಿಲ್ಲ, ಇಚ್ಲಂಪಾಡಿಯಲ್ಲೂ ಜನರು ಓಡಿಸಿದ್ದಾರೆ. ಅಲ್ಲಿಂದ ನೂಜಿಬಾಳ್ತಿಲಕ್ಕೆ ಬರುವ ವಿಚಾರ ತಿಳಿದಿದೆ. ಇಲ್ಲಿಯೂ ಜನರು ಬಿಡುವುದಿಲ್ಲ. ಎರಡೂ ಗ್ರಾಮಸ್ಥರು ಸೇರಿ ಒಟ್ಟಾಗಿ ಓಡಿಸುತ್ತೇವೆ ಎಂದ ಅವರು ಮದ್ಯದಂಗಡಿ ತೆರೆಯುವವರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ನೂಜಿಬಾಳ್ತಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಲಹಾ ಸಮಿತಿ ಅಧ್ಯಕ್ಷ ವಸಂತ ಪುಜಾರಿ ಮಾತನಾಡಿ ‘ಮಧ್ಯವರ್ಜನ ಶಿಬಿರ ಮೂಲಕ ಅನೇಕ ಮದ್ಯವ್ಯಸನಿಗಳನ್ನು ದುಶ್ಚಟದಿಂದ ಬಿಡಿಸಿ ನಮ್ಮ ಊರಿನ ಹೆಂಗಸರ ಕಣ್ಣೀರು ಒರೆಸುವ ಕಾರ್ಯ ನಡೆದಿದೆ. ಆದರೆ ಮತ್ತೆ ಅವರ ಕಣ್ಣೀರು ಸುರಿಸುವ ಕಾರ್ಯ ಯಾವನೇ ವ್ಯಕ್ತಿ ಮಾಡಿದರೂ ನಾವು ಬಿಡುವುದಿಲ್ಲ. ಗ್ರಾಮದ ಎಲ್ಲಾ ಸಂಘ ಸಂಸ್ಥೆಯವರೂ ಒಗ್ಗೂಡಿದ್ದೇವೆ. ಒಟ್ಟಾಗಿ ಹೋರಾಟ ಮಾಡಿದಲ್ಲಿ ಯಾವುದೇ ಅನಧಿಕೃತ ಮದ್ಯದಂಗಡಿ ನಮ್ಮೂರಿನಲ್ಲಿ ತೆರೆಯದಂತೆ ಮಾಡಬಹುದಾಗಿದೆ’ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ತಾಲೂಕು ಯೋಜನಾಧಿಕಾರಿ ಉಮೇಶ್ ಕೋಡಿಗದ್ದೆ ಪ್ರಾಸ್ತಾವಿಕ ಮಾತನಾಡಿ ‘ಯೋಜನೆಯ ಮದ್ಯವರ್ಜನ ಶಿಬಿರ ಮೂಲಕ ಈ ಮೊದಲೇ ಮದ್ಯಪೀಡೆಯನ್ನು ಹೋಗಲಾಡಿಸಿದ್ದೇವೆ. ಆದರೆ ಮತ್ತೆ ಕಾಡುವ ಈ ಪೀಡೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ತೊಲಗಿಸಬೇಕಾಗಿದೆ’ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷ ಭವಾನಿಶಂಕರ ಮಾತನಾಡಿ ‘ಒಂದು ವರ್ಷದಿಂದಲೇ ಇಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಗುಮಾನಿ ಇದ್ದರೂ ಸಂಬಂಧಿಸಿದ ಎಲ್ಲರಿಗೂ ಈ ಬಗ್ಗೆ ಮನವಿ ಸಲ್ಲಿಸಿ ಮದ್ಯದಂಗಡಿ ಬಾರದಂತೆ ಕೇಳಿಕೊಂಡಿದ್ದೇವೆ. ಆದರೂ ಮದ್ಯದಂಗಡಿ ತೆರೆಯಲು ಕೆಲವರು ಮುಂದೆ ಬಂದಿದ್ದು ಇದನ್ನು ಗ್ರಾಮಸ್ಥರೆಲ್ಲ ಸೇರಿ ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ತೆರೆಯಲು ಬಿಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ 16 ಮಂದಿ ಗ್ರಾಮಸ್ಥರನ್ನೊಳಗೊಂಡ ‘ಮದ್ಯದಂಗಡಿ ವಿರುದ್ಧ ಹೋರಾಟ ಸಮಿತಿ’ಯನ್ನು ರಚಿಸಲಾಯಿತು.

Also Read  ಜೇಸಿಐ ಕಡಬ ಕದಂಬದ ಜೇಸಿ ಸಪ್ತಾಹ‌ 'ಕದಂಬೋತ್ಸವ-2023'ಕ್ಕೆ ಚಾಲನೆ

ವೇದಿಕೆಯಲ್ಲಿ ತಾ.ಪಂ. ಸದಸ್ಯ ಗಣೇಶ್ ಕೈಕುರೆ, ನೂಜಿಬಾಳ್ತಿಲ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ರೆಂಜಿಲಾಡಿ ಒಕ್ಕೂಟದ ಅಧ್ಯಕ್ಷೆ ಪುಷ್ಪಲತಾ ಪೇರಡ್ಕ, ಮುಗೇರ ಯುವ ವೇದಿಕೆ ಕಡಬ ವಲಯಾಧ್ಯಕ್ಷ ವಸಂತ ಕುಬಲಾಡಿ, ರೆಂಜಿಲಾಡಿ ಒಕ್ಕೂಟದ ಕಾರ್ಯದರ್ಶಿ ಸುರೇಶ್ ನಿಡ್ಮೇರ್ ಉಪಸ್ಥಿತರಿದ್ದರು. ಪ್ರಮುಖರಾದ ಕಲ್ಲುಗುಡ್ಡೆ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಭಟ್ ನಿಡ್ಡೋ, ಕಡಬ ಸಿಎ ಬ್ಯಾಂಕ್ನ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ಹಳೆನೂಜಿ, ಬೆಥನಿ ಪದವಿಪುರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಸಂತ ಗೌಡ ಮಾರಪ್ಪೆ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕಲ್ಲುಗುಡ್ಡೆ, ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಲೆ, ನೂಜಿಬಾಳ್ತಿಲ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರಮೇಲು, ಮುಗೇರ ಯುವ ವೇದಿಕೆ ನೂಜಿಬಾಳ್ತಿಲ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ನಿಡ್ಡೋ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ, ಗ್ರಾ.ಪಂ. ಸದಸ್ಯರಾದ ರಾಮಚಂದ್ರ ಗೌಡ, ಹರೀಶ್ ಎನ್., ರಜಿತಾ ಪದ್ಮನಾಭ, ವಲ್ಸಾ ಕೆ.ಜೆ., ಅಮ್ಮಣಿ ಜೋಸೆಫ್, ಕಲ್ಲುಗುಡ್ಡೆ ನೂರುಲ್ ಹುದಾ ಮಸೀದಿ ಸಮಿತಿ ಉಪಾಧ್ಯಕ್ಷ ಇಸಾಕ್ ನೀರಾರಿ, ಒರುಂಬಾಳು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಕಂಪ, ಅಡೆಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಹರೀಶ್, ಹೊನ್ನಮ್ಮ, ಸೇವಾ ಪ್ರತಿನಿದಿ ಕರುಣಾಕರ ಕುಬಲಾಡಿ ಸೇರಿದಂತೆ 350ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡರು. ನೂಜಿಬಾಳ್ತಿಲ ಸ್ಪಂದನ ಆಟ್ರ್ಸ್‌&ಸ್ಪೋಟ್ರ್ಸ್‌ ಕ್ಲಬ್ನ ಕಾರ್ಯದರ್ಶಿ ಹರ್ಷಿತ್ ನಡುವಳಿಕೆ ಸ್ವಾಗತಿಸಿ, ನಿರೂಪಿಸಿದರು. ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕಿ ಸುಂದರಿ ಕಲ್ಲುಗುಡ್ಡೆ ಕಾರ್ಯಕ್ರಮ ಸಂಯೋಜಿಸಿದರು.

Also Read  ಅಕ್ರಮ ಮರಳು ದಂಧೆಕೋರರಿಂದ ಸ್ಕೂಟರ್ ಗೆ ಹಾನಿ  ➤ ದೂರು ದಾಖಲು

ಎನ್ಒಸಿ ಅಗತ್ಯವಿಲ್ಲದಿರುವುದೇ ನಮ್ಮ ಹಿನ್ನಡೆ
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಕಟ್ಟಲು, ಅಂಗಡಿ ತೆರೆಯಲು, ಹಸಿ ಮೀನು ಮಾರಾಟ ಮಾಡಲೂ ಪಂಚಾಯತ್ನಿಂದ ಎನ್ಒಸಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಮದ್ಯದಂಗಡಿ ತೆರೆಯಲು ಪಂಚಾಯತ್ನಿಂದ ಯಾವುದೇ ಒಪ್ಪಿಗೆ ಬೇಕಾಗಿಲ್ಲ ಎಂಬ ಸುಪ್ರೀಂ ಕೋರ್ಟ್ನ ಕ್ರಮ ಒಂದು ಪ್ರಮುಖ ಹಿನ್ನಡೆಯಾಗಿದೆ.
– ಸದಾನಂದ ಗೌಡ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷರು

ಗ್ರಾಮದಲ್ಲಿ ಸರಕಾರಿ ಜಾಗದಲ್ಲಿಯೇ ಅನಧಿಕೃತ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಒಂದು ವೇಳೆ ನಮ್ಮ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಊರಿನ ವ್ಯಸನಮುಕ್ತ ಜನರನ್ನು ಮತ್ತೇ ಮದ್ಯಪಾನರನ್ನಾಗಿ ಮಾಡುವುದರ ಮೂಲಕ ಯುವ ಜನಾಂಗದ ದಾರಿ ತಪ್ಪಿಸುವ ಕೆಲಸ ಮಾಡಲು ಮುಂದಾದಲ್ಲಿ ಇಡೀ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮಸ್ಥರನ್ನು ಒಟ್ಟಾಗಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು.
– ಚಂದ್ರಶೇಖರ ಗೌಡ ಹಳೆನೂಜಿ, ಮಾಜಿ ನಿರ್ದೇಶಕರು ಸಿಎ ಬ್ಯಾಂಕ್ ಕಡಬ

ದಲಿತ ಕಾಲೋನಿಗೆ ತಾಗಿಕೊಂಡಿರುವ ಈ ಅನಧಿಕೃತ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ಅಲ್ಲದೇ ಪಂಚಾಯತ್, ಶಾಲೆ, ಸೊಸೈಟಿ, ಹಾಲು ಸೊಸೈಟಿ ಮುಂತಾದ ಜನಸಂರ್ಪಕದ ಪರಿಸರವಾಗಿರುವ ಇಲ್ಲಿ ಮದ್ಯದಂಗಡಿ ತೆರೆಯುವ ಮೂಲಕ ಇಲ್ಲಿನ ಶಾಂತಿ ಕದಡುವ ಕಾರ್ಯಕ್ಕೆ ನಾವು ಎಡೆಮಾಡಿಕೊಡುವುದಿಲ್ಲ.
– ಸುಂದರಿ ಕಲ್ಲುಗುಡ್ಡೆ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕಿ

error: Content is protected !!
Scroll to Top