ಮಂಗಳೂರು: ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ,05. ದ.ಕ ಜಿಲ್ಲೆಯ 1000 ಸರಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಪೂರಕವಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ಕಾರ್ಯಾಗಾರ ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಾಲಾ ಪರಿಸರದಲ್ಲಿ ಕೈತೋಟ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯನ್ನು ಪೂರಕವಾಗಿ ಬಳಸಿಕೊಳ್ಳಲಾಗುವುದು. ಇದರಿಂದ ಕೈತೋಟ ನಿರ್ಮಾಣಕ್ಕೆ ಉತ್ತೇಜನ ದೊರಕಲಿದೆ ಎಂದರು. ಮಕ್ಕಳಲ್ಲಿ ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಇದು ನಿರಂತರವಾಗಿರಬೇಕು ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಂ.ಆರ್ ರವಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ 407 ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈಗಾಗಲೇ ಕೈತೋಟ ನಿರ್ವಾಣವಾಗಿದೆ. ಜಿಲ್ಲೆಯಲ್ಲಿ ಅಕ್ಷರದಾಸೋಹ ಪ್ರಯೋಜನ ಪಡೆಯುತ್ತಿರುವ 1453 ಶಾಲೆಗಳಲ್ಲಿ ಕೈತೋಟ ನಿರ್ಮಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ. ಈ ಪೈಕಿ 942 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದ್ದು, ಇಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ನರೇಗಾ ಯೋಜನೆಯ ನೆರವು ಪಡೆದು ಕೈತೋಟ ನಿರ್ಮಿಸಲಾಗುವುದು ಎಂದರು.

Also Read  ಇಂದು ವಿ.ವಿ ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಜಿಲ್ಲೆಯ 730 ಶಾಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಲಭ್ಯವಿದೆ. ಈ ಜಮೀನಿನಲ್ಲಿ ಕೈತೋಟ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಅಲ್ಲದೇ ಕೈತೋಟ ನಿರ್ಮಾಣದ ಬಳಿಕ ಅವುಗಳ ರಕ್ಷಣೆಗೆ ಜೈವಿಕ ಬೇಲಿ ನಿರ್ಮಿಸಲಾಗುವುದು. ಶಾಲಾ ವಿದ್ಯಾರ್ಥಿಗಳನ್ನು ಕೈತೋಟ ಚಟುವಟಿಕೆಗಳಲ್ಲಿ ತೊಡಗಿಸಿ, ಅವರನ್ನೂ ಪರಿಸರ ಮುಖಿಯಾಗಿ ಬೆಳೆಯಲು ಗಮನ ಹರಿಸಲು ಅವರು ಶಿಕ್ಷಕರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ಮಾತನಾಡಿ, ಶಾಲೆಗಳಲ್ಲಿ ಕೈತೋಟವನ್ನು ಬಳಸುವುದರಿಂದ ಸಾವಯವವಾಗಿ ತರಕಾರಿಗಳು ಬೆಳೆದು, ಶಾಲಾ ಬಿಸಿಯೂಟ ಯೋಜನೆಯಲ್ಲಿ ಸತ್ವಭರಿತ ಪೌಷ್ಠಿಕದಾಯಕ ಆಹಾರ ಮಕ್ಕಳಿಗೆ ದೊರಕಲಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ, ಕೃಷಿ ವಿಜ್ಞಾನಿ ಡಾ. ಶಿವಕುಮಾರ್ ಮಗದ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಹೆಚ್.ಆರ್. ನಾಯಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ ಮತ್ತಿತರರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ವಂದಿಸಿದರು. ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕರಿಗೆ ಕೈತೋಟ ನಿರ್ಮಾಣ ಹಾಗೂ ನಿರ್ವಹಣೆ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ತಜ್ಞರಿಂದ ಮಾಹಿತಿ ನೀಡಲಾಯಿತು.

Also Read  ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

 

error: Content is protected !!
Scroll to Top