(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ,05. 2017-18ನೇ ಸಾಲಿನ ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಅಲ್ಲದೇ ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟಿದ್ದು ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು. ಸದರಿ ಪ್ರಶಸ್ತಿಗೆ ಭಾಗವಹಿಸಲು ಇಚ್ಛಿಸುವವರು ತಮ್ಮ ನಾಮನಿರ್ದೇಶನಗಳನ್ನು ನಿಗದಿತ ನಮೂನೆಯಲ್ಲಿ (ಅನುಬಂಧ-1 ಎ) ತುಂಬಿ ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಜುಲೈ 20 ರೊಳಗಾಗಿ ಸಲ್ಲಿಸಬೇಕು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಜಲಾನಯನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ / ನಿವೃತ್ತರಾದವರನ್ನು ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಪರಿಗಣಿಸಬಹುದು. ಅರ್ಜಿದಾರರ ಹೆಸರಿನಲ್ಲಿ ಪಹಣಿ ಪತ್ರ (ಭೂ ದಾಖಲೆ/ಆರ್.ಟಿ.ಸಿ.) ಕಡ್ಡಾಯವಾಗಿರಬೇಕು. ಈ ಹಿಂದೆ ಕೃಷಿ ಪಂಡಿತ್ ಪ್ರಶಸ್ತಿ ಪಡೆದವರು ಮತ್ತು ಇದೇ ಸಾಧನೆಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸಮಾನಾಂತರ ಪ್ರಶಸ್ತಿ ಪಡೆದಿರುವವರು ಮತ್ತೆ ಸ್ಪರ್ಧಿಸುವಂತಿಲ್ಲ.
ಪ್ರಶಸ್ತಿಯ ವಿವರ ಮತ್ತು ಅರ್ಜಿ ನಮೂನೆಗಳನ್ನು ಸಂಬಂಧಿತ ತಾಲೂಕು ಸಹಾಯಕ ಕೃಷಿ ನಿರ್ದೇಶಕರು/ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಪ್ರಾಥಮಿಕ ಕ್ಷೇತ್ರ ಭೇಟಿ ಕೈಗೊಂಡು ಅವರು ಗಮನಿಸಿದ ಅಂಶಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಜುಲೈ 31 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.