(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.04. ವಿಶ್ವದ ಎಲ್ಲ ದೇಶಗಳ ಪ್ರಶಂಸೆಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿರುವ ಭಾರತದ ಜೊತೆಗೆ ಶ್ರೀಲಂಕಾ ದೇಶವು ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವ ರಾಧಾಕೃಷ್ಣನ್ ಹೇಳಿದ್ದಾರೆ.
ಅವರು ಮಂಗಳವಾರದಂದು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತನ್ನ ಕುಟುಂಬ ಸಮೇತ ಕುಕ್ಕೇ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಆಶ್ಲೇಷ ಬಲಿ ಪೂಜೆ ನೆರವೇರಿಸಿ, ಮಹಾಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾನು ಕುಕ್ಕೇ ಸುಬ್ರಹ್ಮಣ್ಯ ದೇಗುಲಕ್ಕೆ ಮೊದಲ ಬಾರಿಗೆ ಬಂದಿದ್ದು, ಇಲ್ಲಿನ ಪ್ರಕೃತಿದತ್ತ ಪ್ರಶಾಂತ ವಾತಾವರಣವು ಬಹಳಷ್ಟು ಖುಷಿಯನ್ನು ಕೊಟ್ಟಿದೆ. ದೇವರ ದರ್ಶನ ಹಾಗೂ ಸೇವೆಗಳ ನೆರವೇರಿಕೆಯಿಂದ ಸಂತೃಪ್ತಿಗೊಂಡಿರುವೆ. ದೇಗುಲದ ಆಡಳಿತ ಮಂಡಳಿಯು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ದೇಗುಲಕ್ಕೆ ಭೇಟಿ ನೀಡಿದ ಸಚಿವರಿಗೆ ದೇಗುಲದ ಪ್ರಧಾನ ಅರ್ಚಕರು ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಹರಸಿದರು.
ಸಚಿವರ ಜತೆ ಪತ್ನಿ ಜಾನಕಿ, ಪುತ್ರಿ ಅನನ್ಯ, ಪಾಂಡಿಚೇರಿ ಮುಖ್ಯಮಂತ್ರಿಯ ಆಪ್ತ ಸಹಾಯಕ ಬಾಲಕೃಷ್ಣನ್ ಇದ್ದರು. ದೇಗುಲದ ಕಚೇರಿಯಲ್ಲಿ ಸಚಿವರನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶಾಲು ಹೊದಿಸಿ ಗೌರವಿಸಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಚ್. ರವೀಂದ್ರ, ಸಹಾಯಕ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ ಪೆರಾಲು, ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ್ ನಂಭೀಶ, ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.