ಕೋಡಿಂಬಾಳ ರೈಲ್ವೇ ಅಭಿವೃದ್ಧಿ ಹಿನ್ನೆಡೆಯಾಗಲು ಸಂಸದರೇ ಕಾರಣ: ಕಡಬ ಬ್ಲಾಕ್ ಕಾಂಗ್ರೇಸ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.16. ಇಲ್ಲಿಗೆ ಸಮೀಪದ ಕೋಡಿಂಬಾಳ ರೈಲ್ವೇ ನಿಲ್ದಾಣ ಮೂಲಭೂತ ಸೌಕರ್ಯಗಳಿಂದ ವಂಚಿವಾಗಲು ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದ ದ.ಕ ಲೋಕಸಭಾ ಸದಸ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕಡಬ ಬ್ಲಾಕ್ ಕಾಂಗ್ರೇಸ್ ಆರೋಪಿಸಿದೆ.

ಕಡಬ ಬ್ಲಾಕ್ ಕಾಂಗ್ರೇಸ್ನ ನೂತನ ಅಧ್ಯಕ್ಷ ದಿವಾಕರ ಗೌಡ ಶೀರಾಡಿ ಕಡಬ ಅಂಬೇಡ್ಕರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಂಸದರು ಯಾವುದೇ ಕಾಳಜಿವಹಿಸುತ್ತಿಲ್ಲ. ಕೇವಲ ಭರವಸೆ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬಕ್ಕೆ ಹತ್ತಿರವಾಗಿರುವ ಕೋಡಿಂಬಾಳ ರೈಲ್ವೇ ನಿಲ್ದಾಣ 1982 ರಲ್ಲಿ ಅಸ್ಥಿತ್ವಕ್ಕೆ ಬಂದು ಪ್ರತೀ ನಿತ್ಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರ ಪ್ರಯಾಣಕ್ಕೆ ಅನುಕೂಲವಾಗಿತ್ತು. ಆಲಂಕಾರು, ಪೆರಾಬೆ, ಕುಂತೂರು, ಬಲ್ಯ, ಕುಟ್ರುಪ್ಪಾಡಿ, ಹೊಸಮಠ, ನೂಜಿಬಾಳ್ತಿಲ, ರೆಂಜಿಲಾಡಿ, ಬಂಟ್ರ ಮರ್ಧಾಳ, ಕೇಪು, ಮತ್ತು ಕೋಡಿಂಬಾಳ ಮುಂತಾದ ಗ್ರಾಮಗಳ ಜನತೆ ಮಂಗಳೂರು-ಬೆಂಗಳೂರು ಹಾಗೂ ಹತ್ತಿರ ಕೇರಳಕ್ಕೆ ಪ್ರಯಾಣಿಸಲು ಕೋಡಿಂಬಾಳ ನಿಲ್ದಾಣವನ್ನು ಆಶ್ರಯಿಸಿದ್ದರು. ಈ ಹಿಂದೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಲೋಕಲ್ ರೈಲುಗಳು ನಿಲುಗಡೆಯಾಗಿ ಜನರಿಗೆ ಅನುಕೂಲವಾಗಿತ್ತು. ಆದರೆ ರೈಲ್ವೆ ಹಳಿ ಬ್ರಾಡ್ಗೇಜ್ ಆಗಿ ಪರಿವರ್ತನೆಯಾದ ಬಳಿಕ ಪ್ಯಾಸೆಂಜರ್ ರೈಲು ದಿನಕ್ಕೆ ಒಂದು ಬಾರಿ ಮಾತ್ರ ನಿಲುಗಡೆಯಾಗುತ್ತಿದೆ. ಕೋಡಿಂಬಾಳ ರೈಲ್ವೇ ನಿಲ್ದಾಣ ಜನರಿಗೆ ತೀರಾ ಅವಶ್ಯಕತೆ ಎನಿಸಿಕೊಂಡಿದ್ದರೂ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಸಾರ್ವಜನಿಕರು ಹೋರಾಟ ಮಾಡಿದಾಗ ರೈಲ್ವೇ ನಿಲ್ದಾಣದ ಅಭಿವೃದ್ಧಿಪಡಿಸುವ ಭರವಸೆ ನೀಡಿ ಬಳಿಕ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಕಳೆದ ಎರಡು ವರ್ಷಗಳಿಂದ ಇಲ್ಲಿ ಸಮರ್ಪಕವಾಗಿ ಟಿಕೇಟ್ ಕೂಡಾ ದೊರೆಯುತ್ತಿಲ್ಲ. ಕಳೆದ ಇಪ್ಪತೈದು ವರ್ಷಗಳಿಂದ ಇಲ್ಲಿ ಬಿಜೆಪಿಯ ಸಂದರು ಇದ್ದಾರೆ. ಇವರುಗಳು ಯಾರೂ ಕೂಡಾ ಕೋಡಿಂಬಾಳ ರೈಲು ನಿಲ್ದಾಣ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇವಲ ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ ದಿವಾಕರ ಗೌಡ ಸಂಸದರು ಕೋಡಿಂಬಾಳ ರೈಲ್ವೇ ನಿಲ್ದಾಣ ಅಭಿವೃದ್ಧಿಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಶೀಘ್ರದಲ್ಲಿ ನಿಲ್ದಾಣ ಅಭಿವೃದ್ಧಿಯಾಗಬೇಕು ಇಲ್ಲದಿದ್ದರೆ ಕಡಬ ಪರಿಸರದಲ್ಲಿ ಸಂಸದರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕರಿಪತಾಕೆ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದರು.

Also Read  ಸಾಮಾಜಿಕ ಜಾಲತಾಣದಲ್ಲಿ ಮಾನಸಿ ಸುಧೀರ್ ಹವಾ ➤ ಗಣೇಶನನ್ನು ಕನ್ನಡ ಸ್ವರಾಕ್ಷರಗಳಲ್ಲಿ ವರ್ಣಿಸಿದ ಕಲಾವಿದೆ

ಕಡಬ ಬಸ್ ನಿಲ್ದಾಣಕ್ಕೆ ಸಚಿವರಿಂದ ಕ್ರಮದ ಭರವಸೆ: ಪಿ.ಪಿ.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬದಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಈ ಭಾಗದ ಜನರ ಆಶಯಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುರಕವಾಗಿ ಸ್ಪಂದಿಸಿದ್ದಾರೆ ಎಂದರು. ಬಸ್ ನಿಲ್ದಾಣಕ್ಕೆ ಕಡಬದಲ್ಲಿ ಸೂಕ್ತ ಜಾಗವನ್ನು ಆಯ್ಕೆ ಮಾಡಿ ಕಂದಾಯ ಇಲಾಖಾಧಿಕಾರಿಗಳ ಮೂಲಕ ಕಡತ ತಯಾರಿಸಿ ಕೆ.ಎಸ್.ಆರ್.ಟಿ.ಸಿ ಡಿ.ಸಿಯವರಿಗೆ ಸಲ್ಲಿಸಲಾಗಿದೆ, ಆದರೆ ಇಲಾಖಾ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಇನ್ನೂ ಕಾರ್ಯಗತವಾಗಿಲ್ಲ. ಈ ಬಗ್ಗೆ ಶನಿವಾರ ಸುಳ್ಯಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೂಲಕ ಮನವರಿಕೆ ಮಾಡಲಾಗಿದೆ. ತಕ್ಷಣ ಬಸ್ ನಿಲ್ದಾಣಕ್ಕೆ ಪ್ರಕ್ರಿಯೆ ಆರಂಭಿಸಬೇಕು ಎನ್ನುವ ಮನವಿಯನ್ನು ಕೂಡಾ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಸಾರಿಗೆ ಸಚಿವರು ತಕ್ಷಣ ಕಾರ್ಯಪೃವೃತ್ತರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ. ಬಸ್ ನಿಲ್ದಾಣದ ವಿಚಾರದಲ್ಲಿ ನಾವು ತುಂಬಾ ಶ್ರಮವಹಿಸಿದ್ದೇವೆ, ಇದರ ಫಲವಾಗಿ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಪಿ.ಪಿ.ವರ್ಗೀಸ್ ಹೇಳಿದರು.

Also Read  ವಿಶೇಷ ಲೇಖನ- "ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ" ಡಾ. ಮುರಲೀ ಮೋಹನ ಚೂಂತಾರು

ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಸದಸ್ಯರಾದ ಕೆ.ಎಂ.ಹನೀಫ್, ಕೃಷ್ಣಪ್ಪ ಪುಜಾರಿ, ಸೈಮನ್ ಸಿ.ಜೆ, ಶಾಲಿನಿ ಸತೀಶ್ ನಾಯಕ್, ಶರೀಫ್ ಎ.ಎಸ್, ಕಾಂಗ್ರೇಸ್ ಮುಖಂಡರಾದ ಮನಮೋಹನ ಗೋಳ್ಯಾಡಿ, ಶಶಿಧರ ಬೊಟ್ಟಡ್ಕ, ತೋಮಸ್ ಇಡೆಯಾಲ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕರ್ನಾಟಕದಲ್ಲಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಸಿದ್ಧತೆ

 

error: Content is protected !!
Scroll to Top