(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ.03. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2017-18ನೇ ಸಾಲಿನ ಕ್ರಿಯಾ ಯೋಜನೆ ಅನುಮೋದನೆ ವೇಳೆ ಮಂಗಳಾ ಕ್ರೀಡಾಂಗಣಕ್ಕೆ ಸೇರಿದಂತೆ ತಾಲೂಕು ಕ್ರೀಡಾಂಗಣಗಳಿಗೆ ಹಾಗೂ ಕ್ರೀಡಾ ಸಾಮಗ್ರಿ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಇಂದು ನಡೆದ ದ.ಕ ಜಿಲ್ಲಾ ಪಂಚಾಯತ್ನ 12ನೇ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಹೇಳಿದರು.
ಮಂಗಳಾ ಕ್ರೀಡಾಂಗಣ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದ್ದು, ತಮ್ಮ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಯುವಕ ಮಂಡಳಿಗಳಿಗೆ ನೀಡುವಂತಾಗಬೇಕು; ನಮ್ಮ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಖರೀದಿಗೆ ಅವಕಾಶ ಒದಗಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಸದಸ್ಯರ ಒತ್ತಾಯದಂತೆ ಕ್ರಿಯಾಯೋಜನೆಗೆ ಅನುಮೋದನೆ ನೀಡದೆ ಪ್ರತ್ಯೇಕವಾಗಿ ಸಭೆಕರೆಯಲು ಸಭಾಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅವರು ಸೂಚಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎಂ ಆರ್ ರವಿ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಇಲಾಖೆಗಳ ಆಡಳಿತ ಜಿಲ್ಲಾ ಪಂಚಾಯತ್ ನಿರ್ವಹಣೆಗೊಳಪಟ್ಟು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸಮಿತಿಯಲ್ಲಿರಬೇಕೆಂದು ಹೇಳಿದರಲ್ಲದೆ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಮಂಗಳಾ ಕ್ರೀಡಾಂಗಣ ಸಮಿತಿ ರಚನೆಯನ್ನು ಪುನರ್ರಚಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಎಲ್ಲ ಇಲಾಖೆಗಳು ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮವಹಿಸಿ ಎಂದು ಆದೇಶಿಸಿದ ಸಿಇಒ ಅವರು, ಅನುದಾನ ಲ್ಯಾಪ್ಸ್ ಆಗದಂತೆಯೂ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಾಯಿಸಮಿತಿ ಕಾರ್ಯಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡದೆ ಸವಿವರ ಚರ್ಚೆ ನಡೆದು ಸದಸ್ಯರು ಹಲವು ಬದಲಾವಣೆಗಳನ್ನು ಸಾಮಾನ್ಯ ಸಭೆಯಲ್ಲಿ ಸದಸ್ಯರು ಸೂಚಿಸಿದರು.
ಗ್ರಾಮ ಪಂಚಾಯತ್ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಒಂದು ಆಸನ ವ್ಯವಸ್ಥೆ ಹಾಗೂ ಸಾಧ್ಯವಿರುವಲ್ಲಿ ಕ್ಯಾಬಿನ್ ಒದಗಿಸುವಂತೆಯೂ ಸಿಇಒ ಅವರು ಸೂಚಿಸಿದರಲ್ಲದೆ ಇದನ್ನೊಂದು ಮಾದರಿ ವ್ಯವಸ್ಥೆಯನ್ನಾಗಿಸುವ ಬಗ್ಗೆಯೂ ವರದಿ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಕೊರಗ ಮಕ್ಕಳ ಪಿಯುಸಿ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರಿಗೆ ಈಗ ನೀಡುತ್ತಿರುವ ನೆರವಿನ ವಿಧಾನವನ್ನು ಬದಲಿಸಿ ಅವರಿಗೆ ಪ್ರವೇಶಾತಿ ವೇಳೆಯೆ ಶಿಕ್ಷಣ ಶುಲ್ಕ ಪಾವತಿಸುವಂತೆ ಕ್ರಿಯಾ ಯೋಜನೆ ರೂಪಿಸಲು ಸಿಇಒ ಅವರು ಐಟಿಡಿಪಿ ಅಧಿಕಾರಿಗೆ ಸೂಚನೆ ನೀಡಿದರು.
ಐಟಿಡಿಪಿ ಇಲಾಖೆಯಲ್ಲಿ ಡಾಟಾ ಎಂಟ್ರಿ ಹಾಗೂ ಅಡುಗೆ ಕೆಲಸ ಒಬ್ಬರೇ ಮಾಡಿ ಎರಡು ಸಂಬಳ ತೆಗೆದುಕೊಳ್ಳುತ್ತಿದ್ದಾರೆಂದು ಸದಸ್ಯರು ಆರೋಪಿಸಿದಾಗ ಉತ್ತರಿಸಿದ ಅಧಿಕಾರಿ ಆರ್ ಟಿಜಿಎಸ್ ವ್ಯವಸ್ಥೆಯಲ್ಲಿ ವೇತನ ಪಾವತಿಯಾಗುತ್ತಿದ್ದುನಿರ್ದಿಷ್ಟ ದೂರುಗಳಿದ್ದರೆ ಪರಿಶೀಲಿಸುವುದಾಗಿ ಹೇಳಿದರು. ಯೋಜನೆ ಅನುಮೋದನೆ ಸ್ಥಗಿತಗೊಂಡರೆ ಕರ್ತವ್ಯ ನಿರ್ವಹಿಸುವವರ ವೇತನಕ್ಕೆ ತೊಂದರೆಯಾಗಲಿದೆ ಎಂಬ ಅಂಶವನ್ನು ಅಧಿಕಾರಿಗಳು ಸಭೆಯ ಗಮನಸೆಳೆದಾಗ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.
ವಾರ್ಷಿಕ ಕ್ರಿಯಾಯೋಜನೆಗಳ ಕುರಿತು ಸವಿವರ ಚರ್ಚೆ ನಡೆದು ಕಾಮಗಾರಿಗಳಿಗೆ ಅನುಮೋದನೆ ನೀಡಲು ಭಿನ್ನಾಭಿಪ್ರಾಯಗಳು ವ್ಯಕ್ತವಾಯಿತು. ಪಶುಸಂಗೋಪನೆ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡುವಲ್ಲೂ ಸದಸ್ಯರು ಪ್ರತಿಯೊಂದು ಯೋಜನೆ ಬಗ್ಗೆ ಚರ್ಚಿಸಿ ಅನುದಾನ ನಿಗದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಎಂದು ಸಿಇಒ ಹೇಳಿದರು.
ಸ್ಥಾಯಿಸಮಿತಿ ಅಧ್ಯಕ್ಷರಾದ ಯು ಪಿ ಇಬ್ರಾಹಿಂ ಅವರು, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಪ್ರತ್ಯೇಕ ಕ್ರಿಯಾ ಯೋಜನೆ ಸಲ್ಲಿಸಲು ಸೂಚಿಸಿದರು. ಅಡಿಷನಲ್ ಅಜೆಂಡಾದ ಬಗ್ಗೆಯೂ ಚರ್ಚಿಸಲಾಯಿತು. ಕ್ರಿಯಾಯೋಜನೆ ರೂಪಿಸುವಾಗ ಸದಸ್ಯರೊಂದಿಗೆ ಚರ್ಚಿಸಿ ಸ್ಥಾಯಿಸಮಿತಿಯಲ್ಲಿಟ್ಟು ಬಳಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಿರಿ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಜನಾರ್ಧನ ಗೌಡರು ಸಲಹೆ ಮಾಡಿದರು. ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸ್ಥಾಯಿಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಪಾಲ್ಗೊಂಡರು.