(ನ್ಯೂಸ್ ಕಡಬ) newskadaba.com ಮ0ಗಳೂರು, ಜುಲೈ 2. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್, ಸಾಂಖ್ಯಿಕ ತಜ್ಞರು, ಇವರ 125ನೇ ಜನ್ಮ ದಿನದ ಅಂಗವಾಗಿ 12ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ” ಆಚರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜೂನ್ 29 ರಂದು ಸಾಂಖ್ಯಿಕ ದಿನವನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ|| ಉದಯ ಶೆಟ್ಟಿ ಕಾರ್ಯಕ್ರಮದ ಸ್ವಾಗತಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಂ. ವಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜ ಭಾಗವಹಿಸಿದ್ದರು. ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ. ಮಹಾಲನೋಬಿಸ್, ಇವರ ಹುಟ್ಟು ಹಬ್ಬದ ಸಂಸ್ಮರಣೆ ಪ್ರಯುಕ್ತ ದೀಪ ಬೆಳಗಿಸಿ ಹಾಜರಿದ್ದ ಎಲ್ಲರೂ ಪುಷ್ಪ ನಮನಗೈದರು.
ಕೇಂದ್ರ ಸರಕಾರದ ನಿರ್ದೇನಶನದಂತೆ ಸಾಂಖ್ಯಿಕ ದಿನಾಚರಣೆ ಪ್ರಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ “ಆಡಳಿತಾತ್ಮಕ ಅಂಕಿ ಅಂಶಗಳ ಗುಣಮಟ್ಟ ರೀತಿ” ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ಕು||ಫಾತಿಮತ್ ಸನಿದಾ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು, ಪ್ರಥಮ ಬಹುಮಾನ ರೂ.1000/-, ಕು|| ಶ್ರೀದೇವಿ. ಕೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು, ದ್ವಿತೀಯ ಬಹುಮಾನ ರೂ.750/-, ಹಾಗೂ ಕು||ರುಚಿತಾ ಹೆಗ್ಡೆ, ವಿವೇಕಾನಂದ ಕಾಲೇಜು, ಪುತ್ತೂರು, ತೃತೀಯ ಬಹುಮಾನ ರೂ.500/-ನ್ನು ನೀಡಲಾಯಿತು.
ಸಭೆಯಲ್ಲಿ ದ.ಕ.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯಲ್ಲಿ ನಿವೃತ್ತಿಗೊಂಡ ಹಲವು ಅಧಿಕಾರಿಗಳು/ ಸಿಬ್ಬಂದಿಯವರು ಭಾಗವಹಿಸಿದ್ದರು.
ಕಛೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಮಾರುತಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿರ್ದೇಶಕ ಮನಮೋಹನ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
