(ನ್ಯೂಸ್ ಕಡಬ) newskadaba.com, ಜೂ.29. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಕಾಲಘಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ ಎಲ್ಲ ವೈದ್ಯರಿಗೂ ಅನ್ವಯಿಸಲಿಕ್ಕಿಲ್ಲ. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ಣ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ತನ್ನ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು, ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅಪರ್ಪಿಸಿಕೊಳ್ಳುವ ಸುದಿನ. ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದರೆ ಇಂದು ಪ್ರತಿಯೊಬ್ಬರು ಒತ್ತಡದ ಜೀವನದಿಂದಾಗಿ ಹತ್ತಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರು ಆರೋಗ್ಯವಂತರಾಗಿರುವುದು ಅವಶ್ಯಕ. ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳಿಗೆಗೆ ತಮ್ಮ ಬದುಕನ್ನು ಸಮರ್ಪಿಸಿ ಕೊಂಡಿರುವ ವೈದ್ಯರಿಗೆ ಅಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವದು. ಅಂದು ಭಾರತದ ವೈದ್ಯರೆಲ್ಲರೂ ಅಭಿಮಾನ ಪಡುವ ಮಹಾವೈದ್ಯ ಶಿಕ್ಷಣ ತಜ್ಞ, ಸ್ವಾತಂತ್ರ ಹೋರಾಟಗಾರ ಶ್ರೇಷ್ಠ ರಾಜಕೀಯ ಧುರೀಣ ಅಪ್ರತಿಮ ವ್ಯಕ್ತಿತ್ವದ ಡಾ. ಬಿ.ಸಿ. ರಾಯ್ ಜನ್ಮವೆತ್ತ ದಿನ. (1881 ಜುಲೈ 1) ಇವರ ಸವಿನೆನಪಿಗಾಗಿ ಈ ದಿನವನ್ನು ವೈದ್ಯರ ದಿನ ಎಂದು ಆಚರಿಸುತ್ತೇವೆ. ಈ ದಿನದಂದು ಭಾರತದ ಎಲ್ಲಾ ವೈದ್ಯ ಭಾಂದವರು ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಮನುಸಂಕುಲದ ಉದ್ಧಾರಕ್ಕಾಗಿ ಪ್ರತಿಜ್ಞೆ ಮಾಡುತ್ತಾರೆ. ಬಿಹಾರದ ಪಾಟ್ನಾದಲ್ಲಿ ಜನಿಸಿದ ಬಿ.ಸಿ.ರಾಯ್ ಅವರು ಕಲ್ಕತ್ತದಲ್ಲಿ ಎಂ.ಬಿ.ಬಿ.ಎಸ್. ಶಿಕ್ಷಣ ಮುಗಿಸಿದರು. ಅವರ ಜ್ಞಾನ ಸಂಪತ್ತಿಗೆ, ಅವರ ಅನುಭವಕ್ಕೆ ಯೋಗ್ಯತೆಗೆ ಇಂಗ್ಲೆಂಡ್ನ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ತಾಯಿ ನಾಡಿನ ವ್ಯಾಮೋಹ ಅವರನ್ನು ಬಿಡಲಿಲ್ಲ. 1911 ರಲ್ಲಿ ಭಾರತಕ್ಕೆ ಬಂದು ನಮ್ಮ ದೇಶದ ಬಡಜನರ ಉದ್ದಾರಕ್ಕಾಗಿ ಟೊಂಕ ಕಟ್ಟಿ ನಿಂತರು. ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಾವಿರಾರು ಮಂದಿ ಯುವ ವೈದ್ಯರಿಗೆ ಆದರ್ಶ ಪ್ರಾಯರಾದರು. ಇವತ್ತಿಗೂ ಅವರಿಂದ ಕಲಿತ ನೂರಾರು ವೈದ್ಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಮಿನುಗುತ್ತಿದ್ದಾರೆ. ಅವರು ತಮ್ಮ ಪ್ರತಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು.
ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿದ ವ್ಯಕ್ತಿ ಬಿ.ಸಿ. ರಾಯ್ ಎಂದರೆ ಅತಿಶಯೋಕ್ತಿಯಲ್ಲ. ತಾವು ನಂಬಿದ ತತ್ವ, ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದರು. ಸ್ವಾತಂತ್ಯ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಏರಿ ತಮ್ಮ ಪದವಿಯ ಗೌರವವನ್ನು ಇಮ್ಮಡಿಗೊಳಿಸಿದರು. ಹಲವಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಕಟ್ಟಿಸಿ ಬಡ ವಿದ್ಯಾರ್ಥಿ ಗಳಿಗೆ ಬಡ ರೋಗಿಗಳಿಗೆ ಆಶಾಕಿರಣವಾದರು.
ಗೆಳೆಯರೇ, ಒಂದು ಮಾತು ಯಾವತ್ತೂ ನೆನಪಿನಲ್ಲಿಡಿ. ವೈದ್ಯರೂ ಕೂಡಾ ನಿಮ್ಮಂತೆಯೇ ಒಂದು ಜೀವ. ಅವರಿಗೂ ತಮ್ಮಂತೆ ಆದ ಆಸೆ, ಆಕಾಂಕ್ಷೆ, ನೋವು, ನಲಿವು ಭಾವನೆಗಳು ಇರುತ್ತದೆ. ಅವರ ಭಾವನೆಗಳಿಗೂ ಒಂದಷ್ಟು ಗೌರವ ನೀಡಿ. ಇನ್ನೂ ಯಾಕೆ ಯೋಚಿಸುತ್ತಿದ್ದೀರಾ. ಫೋನ್ ಕೈಗೆತ್ತಿಕೊಂಡು ಒಂದು ಮೆಸೇಜ್ ಮಾಡಿ. ನಿಮ್ಮ ವೈದ್ಯರ ಮೇಲಿನ ಪ್ರೀತಿ, ಆದರ, ಗೌರವವನ್ನು ಸಣ್ಣ ಮೆಸೇಜ್ ಮುಖಾಂತರ ತಿಳಿಸಿಬಿಡಿ. ಸಂಕೋಚ ಬೇಡ. ಆ ಜೀವಕ್ಕೂ ಒಂದಷ್ಟು ಅಮೃತ ಸಿಂಚನವಾಗಲಿ. ಅದಿಲ್ಲವಾದ್ದಲ್ಲಿ ಫೇಸ್ಬುಕ್ಕಲ್ಲಿ ಒಂದು ಸಣ್ಣ ಕಮೆಂಟ್ ಹಾಕಿಬಿಡಿ. ವಾಟ್ಸಪ್ ಮಾಡಿದರೂ ಪರವಾಗಿಲ್ಲ. ನಿಮ್ಮ ಕಮೆಂಟ್ ಅಥವಾ ಮೆಸೇಜಿನ ಶಕ್ತಿ ಮತ್ತು ಸ್ಪೂರ್ತಿ, ನಿಮ್ಮ ವ್ಶೆದ್ಯರಿಗೆ ನೂರಾನೆಯ ಆತ್ಮಸ್ಥೆರ್ಯ ನೀಡಿ ಮತ್ತೊಂದು ಜೀವ ಉಳಿದರೂ ಉಳಿಯಬಹುದು. ಎಂದು ಡಾ| ಮುರಲಿ ಮೋಹನ್ ಚೂಂತಾರು ಸುರಕ್ಷ ದಂತ ಚಿಕಿತ್ಸಾಲಯ,ಅಭಿಪ್ರಾಯ ಪಟ್ಟರು.