(ನ್ಯೂಸ್ ಕಡಬ) newskadaba.com ಕಡಬ, ಜು.16. ಕಳೆದ ಎರಡು ದಶಕಗಳ ಬೇಡಿಕೆಯಾದ ಪುತ್ತೂರು ತಾಲೂಕಿನ ಶಾಂತಿಮೊಗರು ಎಂಬಲ್ಲಿ ಕುಮಾರಧಾರಾ ನದಿಗೆ ಸೇತುವೆಯ ಬೇಡಿಕೆಯು ಕೊನೆಗೂ ಮುಗಿದಿದ್ದು, ಕಳೆದ ಬುಧವಾರದಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ಕಾಮಗಾರಿಯು ಪುರ್ಣಗೊಂಡು ತಿಂಗಳುಗಳೆರಡು ಕಳೆದಿದ್ದರೂ ಜನಪ್ರತಿನಿಧಿಗಳಿಗೆ ಸಮಯ್ ಅಭಾವದಿಂದಾಗಿ ಮೂರ್ನಾಲ್ಕು ಸಲ ಉದ್ಘಾಟನೆಗೆ ದಿನ ನಿಗದಿಯಾಗಿ ಮುಂದೂಡಿಕೆಯಾಗಿತ್ತು. ಜುಲೈ 12ರಂದು ಲೋಕೋಪಯೋಗಿ ಇಂಜಿನಿಯರ್ ನಾಗರಾಜ್ ರವರು ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಇದೀಗ ಹಲವು ದಶಕಗಳ ಬೇಡಿಕೆ ಈಡೇರಿದ ಖುಷಿಯಲ್ಲಿ ಭಾನುವಾರದಂದು ಸಾರ್ವಜನಿಕರು ಸೇರಿ ತೆಂಗಿನಕಾಯಿಯನ್ನು ಒಡೆಯುವುದರ ಮೂಲಕ ಸೇತುವೆಯನ್ನು ಉದ್ಘಾಟಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಈ ನಡುವೆ ಸೇತುವೆಯ ಜಮೀನು ಒತ್ತುವರಿಯ ಪರಿಹಾರಕ್ಕಾಗಿ ನಾಲ್ಕು ಕುಟುಂಬಗಳು ಅಲೆದಾಡುತ್ತಿದ್ದು, ಸುಮಾರು 47 ಲಕ್ಷ ರೂ.ಗಳಷ್ಟು ರೈತರಿಗೆ ಬಾಕಿ ಇದೆ. ಸೇತುವೆಯ ಅಧಿಕೃತ ಉದ್ಘಾಟನೆ ಈ ತಿಂಗಳ ಕೊನೆಯಲ್ಲಿ ನಡೆಯುವ ಬಗ್ಗೆ ಮಾಹಿತಿ ಇದೆ. ಭಾನುವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂತ್ರಸ್ತರು ಸರಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಧಿಕೃತ ಉದ್ಘಾಟನೆ ನಡೆಸುವುದಕ್ಕಿಂತ ಮೊದಲು ಪರಿಹಾರ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನಿಡಿದ್ದಾರೆ.