(ನ್ಯೂಸ್ ಕಡಬ) newskadaba.com ಕಡಬ, ಜೂ.26. ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ ಸರ್ವೆ ನಂ.33/3 ರಲ್ಲಿ 0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ.
ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು ಕೆರೆಯನ್ನು ಅಳೆದು ಗಡಿ ಗುರುತು ಮಾಡಿ ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ ನಿರೀಕ್ಷಕರಿಗೆ ಮೌಖಿಕ ಆದೇಶ ನೀಡಿದ್ದರು. ಅದರಂತೆ ಕಂದಾಯ ನಿರೀಕ್ಷಕರು ಕೆರೆಯನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡಲು ಪತ್ರ ಬರೆದಿದ್ದರೂ ಭೂಮಾಪನ ಇಲಾಖೆಯು ಗಡಿ ಗುರುತು ಮಾಡಿಲ್ಲ. ಕೆರೆಯ ಜಮೀನಿನ ಗಡಿ ಗುರುತು ಮಾಡಲು ಭೂಮಾಪನ ಇಲಾಖೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪರಿಸರಕ್ಕೆ ನೀರುಣಿಸುತ್ತಿದ್ದ ಕೆರೆ: ಅರ್ಪಾಜೆಯ ಸರಕಾರಿ ಕೆರೆಯು ಉದೇರಿ, ನಾಲ್ಗುತ್ತು ಹಾಗೂ ಅರ್ಪಾಜೆ ಪರಿಸರದ ಕೃಷಿ ತೋಟಗಳಿಗೆ ಹಾಗೂ ಭತ್ತದ ಗದ್ದೆಗಳಿಗೆ ನೀರುಣಿಸುವ ಮೂಲಕ ಸಾರ್ವಜನಿಕರಿಗೆ ಸಹಕಾರಿಯಾಗಿತ್ತು. ಪರಿಸರದಲ್ಲಿ ಅಂತರ್ಜಲಮಟ್ಟ ಏರಿಕೆಗೂ ಕಾರಣವಾಗಿತ್ತು. ಆದರೆ ಇದೀಗ ಸದ್ರಿ ಕೆರೆಯಲ್ಲಿ ಮಳೆಗಾಲದಲ್ಲಿಯೂ ನೀರು ನಿಲ್ಲಲು ಅವಕಾಶ ನೀಡುತ್ತಿಲ್ಲ. ಕೆರೆಯ ಪಶ್ಚಿಮ ಭಾಗದಲ್ಲಿ ಹೆಚ್ಚುವರಿ ನೀರು ಹರಿದುಹೋಗಲು ಇರುವ ಕಾಲುವೆಯನ್ನು ಸುಮಾರು 7 ರಿಂದ 8 ಅಡಿ ಆಳಗೊಳಿಸಿರುವುದರಿಂದ ನಿರಂತರ ಮಳೆ ಸುರಿದರೂ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆಯಲ್ಲಿ ನೀರು ನಿಲ್ಲದೇ ಇರುವುದರಿಂದ ಕೆರೆಯು ಬಯಲು ಪ್ರದೇಶದಂತಾಗಿದ್ದು, ಪರಿಸರದಲ್ಲಿ ಅಂತರ್ಜಲಮಟ್ಟವೂ ಕುಸಿದಿದೆ. ಆದುದರಿಂದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ನೀರು ಹರಿದುಹೋಗುವ ಕಾಲುವೆಯನ್ನು ಮುಚ್ಚಿಸಿ ಕೆರೆಯನ್ನು ಸಂರಕ್ಷಣೆ ಮಾಡಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು.
ಈ ಮಧ್ಯೆ ಅರ್ಪಾಜೆ ಕೆರೆಯನ್ನು ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ತಾಂತ್ರಿಕ ಅನುಮತಿ ನೀಡುವಂತೆ ಸ್ಥಳೀಯ ಕೃಷಿಕ ಚಾಕೋ ಫಿಲಿಪ್ ಅವರು ಕಡಬ ಗ್ರಾಮ ಪಂಚಾಯತ್ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಆದರೆ ಕೆರೆಯ ಗಡಿ ಗುರುತು ಆಗದೇ ಇರುವುದರಿಂದ ಅವರ ಮನವಿಗೆ ಇಲಾಖೆಗಳಿಂದೂ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ.
ಕೆರೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ಕೃಷಿಕ ಚಾಕೋ ಫಿಲಿಪ್ ಅವರು ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಪಂಚಾಯತ್ ಕೂಡ ಉತ್ಸುಕವಾಗಿದೆ. ಆದರೆ ಕೆರೆಯ ಗಡಿ ಗುರುತು ಆದ ಬಳಿಕವಷ್ಟೇ ನಾವು ಮುಂದುವರಿಯಲು ಸಾಧ್ಯ. ಈಗಾಗಲೇ ಕಂದಾಯ ಇಲಾಖೆಯಿಂದ ಕೆರೆಯನ್ನು ಅಳೆದು ಕೊಡುವಂತೆ ಭೂಮಾಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ನಾವು ಕೂಡ ಪ್ರತ್ಯೇಕ ಪತ್ರ ಬರೆದಿದ್ದೇವೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ
ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಮಳೆ ನೀರು ಇಂಗಿ ಪರಿಸರದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರೊಂದಿಗೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲು ಸಾಧ್ಯ ಎನ್ನುವ ಉದ್ದೇಶದಿಂದ ಸ್ಥಳೀಯರು ಸ್ವಂತ ಖರ್ಚಿನಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಆದರೆ ಕೆರೆಯ ಗಡಿ ಗುರುತು ಆಗದೇ ಇರುವುದರಿಂದ ನಮಗೆ ತಾಂತ್ರಿಕ ಅನುಮತಿ ಸಿಕ್ಕಿಲ್ಲ.
– ಚಾಕೋ ಫಿಲಿಪ್, ಸ್ಥಳೀಯ ಕೃಷಿಕ