ಚಕ್ರವಿಲ್ಲದೆ ಸ್ಥಗಿತಗೊಂಡ ಕಡಬದ ಜೀವರಕ್ಷಕ ► ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಅಪಘಾತ ಮತ್ತು ತುರ್ತು ಆರೋಗ್ಯ ಸಮಸ್ಯೆ ಸಂಭವಿಸಿದಾಗ ಆಸ್ಪತ್ರೆಗೆ ಕೊಂಡೊಯ್ಯಲು ವಾಹನ ಸಮಸ್ಯೆ ಬರಬಾರದು. ಇದರಿಂದ ಜನರು ಪ್ರಾಣ ಕಳೆದುಕೊಳ್ಳಬಾರದು ಎಂಬ ಸದುದ್ದೇಶದಿಂದ ಸರಕಾರ 108 ವಾಹನವನ್ನು ಪ್ರಾರಂಭಿಸಿತ್ತು. ಜನರು ಇದರ ಪ್ರಯೋಜನವನ್ನು ಪಡೆದುಕೊಂಡರು, ಆದರೆ ಕಡಬದ ಆಂಬ್ಯುಲೆನ್ಸ್ ಮಾತ್ರ ಒಂದಲ್ಲ ಒಂದು ಸಮಸ್ಯೆಯಿಂದ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ.

ಇದೀಗ ಕಳೆದೊಂದು ವಾರದಿಂದ ಕಡಬದ ಆ್ಯಂಬುಲೆನ್ಸ್ ನಾಪತ್ತೆಯಾಗಿದೆ, ಈ ಬಗ್ಗೆ 108 ವಾಹನದ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ಟಯರ್ ಸಮಸ್ಯೆಯಿಂದ 108 ವಾಹನವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಉತ್ತರ ಸಿಗುತ್ತದೆ. ನಮಗೆ 108 ವಾಹನ ಅಗತ್ಯ ಇದೆ ಎಂದು ಪ್ರಶ್ನಿಸಿದರೆ ಕಡಬದ ಸಮೀಪ 15 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು ಸುಬ್ರಹ್ಮಣ್ಯದಲ್ಲಿ 108 ವಾಹನ ಇದೆ ಅದನ್ನು ಕಡಬ ಭಾಗಕ್ಕೆ ಕಳುಹಿಸುತ್ತೇವೆ ಎಂಬ ಉತ್ತರವನ್ನು ನೀಡುತ್ತಾರೆ. ಈ ಹಿಂದೆಯೂ ಕೂಡ ಈ ಜೀವ ರಕ್ಷಕ ವಾಹನ ಸವೆದ ಟಯರ್ನಲ್ಲಿ ಸಂಚರಿಸುತ್ತಿತ್ತು ಇಷ್ಟಾದರೂ ಟಯರ್ ಮಾತ್ರ ಬದಲಾಯಿಸಿಲ್ಲ. ಕಡಬಕ್ಕೆ 108 ವಾಹನ ಅತೀ ಅಗತ್ಯವಾಗಿಯೇ ಬೇಕಾಗಿದ್ದು, ಈಗಾಗಲೇ ತುರ್ತು ಸಂದರ್ಭದಲ್ಲಿ 108 ವಾಹನಕ್ಕೆ ಕರೆ ಮಾಡಿದಾಗ ಆಲಂಕಾರಿನಿಂದ ಅಥವಾ ಸುಬ್ರಹ್ಮಣ್ಯದಿಂದ ಬರುತ್ತಿದೆ. ಇದರಿಂದ ಬಹಳ ತೊಂದರೆಯಾಗುತ್ತಿದೆ. ಕೂಡಲೇ ಕಡಬದ 108 ವಾಹನವನ್ನು ದುರಸ್ತಿ ಮಾಡಿಸಿ ಸೇವೆಗೆ ಒದಗಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

error: Content is protected !!

Join the Group

Join WhatsApp Group