ಕೆಎಸ್ಸಾರ್ಟಿಸಿ ಬಸ್ಸನ್ನು ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದ ಕಾಡಾನೆ ► ಬಿಳಿನೆಲೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿಯಂತಹುದೇ ಇನ್ನೊಂದು ಘಟನೆ

(ನ್ಯೂಸ್ ಕಡಬ) newskadaba.com ಮೈಸೂರು, ಜೂ.24. ಮರಿಯಾ‌ನೆಯನ್ನು ರಕ್ಷಿಸುವ ಸಲುವಾಗಿ ತಾಯಿ ಆನೆಯೊಂದು ಬಸ್ಸೊಂದನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿ ಭಾನುವಾರದಂದು ನಡೆದಿದೆ.

ಚಿಕ್ಕಮಗಳೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶಕ್ಕೆ ತಲುಪಿದಾಗ ಮರಿಯಾನೆಯೊಂದಿಗೆ ತಾಯಿ ಆನೆಯು ರಸ್ತೆಯಲ್ಲಿ ಹಾದು ಹೋಗುತ್ತಿತ್ತೆನ್ನಲಾಗಿದ್ದು, ಈ ವೇಳೆ ಮರಿಯಾನೆಯ ರಕ್ಷಣೆಗೋಸ್ಕರ ಬಸ್ಸನ್ನೇ ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಬೊಬ್ಬೆ ಹೊಡೆದಾಗ ಆನೆಯು ಹಿಂತಿರುಗಿ ಹೋಗಿದ್ದು, ಸಂಭಾವ್ಯ ಅನಾಹುತ ತಪ್ಪಿದೆ. ಈ ದೃಶ್ಯವನ್ನು ಪ್ರಯಾಣಿಕರೋರ್ವರು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.

Also Read  ಎಸ್ಡಿಪಿಐ ಆತೂರು ವಲಯ ಸಮಿತಿ ಕಾರ್ಯಕರ್ತರ ಸಭೆ ➤ ಫ್ಯಾಸಿಸ್ಟರನ್ನು ಸೋಲಿಸುವುದೇ ನಮ್ಮ ಗುರಿ - ಅಶ್ರಫ್ ಮಾಚಾರ್

ಇಂತಹುದೇ ಘಟನೆ ಶನಿವಾರದಂದು ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಸಂಭವಿಸಿತ್ತು. ಚಿಕ್ಕಮಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳಿದ್ದ ಓಮ್ನಿ ಕಾರಿನ ಮೇಲೆ ಬಿಳಿನೆಲೆಯ ಕಿದು ಸಮೀಪ ಕಾಡಾನೆಯೊಂದು ದಾಳಿ ನಡೆಸಿ ಮುಂಭಾಗಕ್ಕೆ ಕಾಲು ಹಾಗೂ ಸೊಂಡಿಲಿನಿಂದ ಗುದ್ದಿ ಹಾನಿಗೊಳಿಸಿತ್ತು. ಅದೃಷ್ಟವಶಾತ್ ಅದೇ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದು ಹಾರ್ನ್ ಮಾಡುತ್ತಾ ಬಂದಾಗ ಗಾಬರಿಗೊಂಡ ಕಾಡಾನೆಯು ಕಾರನ್ನು ಬಿಟ್ಟು ಓಡಿ ಹೋಗಿದ್ದರಿಂದ ಕಾರಿನಲ್ಲಿದ್ದ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿತ್ತು.

error: Content is protected !!
Scroll to Top