ಕಳಪೆ ಕಾಮಗಾರಿಯಿಂದ ಹದಗೆಟ್ಟ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆ ► ಕಾಮಗಾರಿ ಪೂರ್ತಿಯಾಗಿ ಎರಡು ತಿಂಗಳೊಳಗೆ ಕಿತ್ತು ಹೋದ ಡಾಮರು

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಗೋಳಿತ್ತಡಿ- ನೆಲ್ಯೊಟ್ಟು ಭಾಗದ ಜನರ ರಸ್ತೆ ಅಭಿವೃದ್ದಿಯ ಹಲವು ವರ್ಷಗಳ ಬೇಡಿಕೆಯು ಈಡೇರಿದೆ ಎನ್ನುವ ಖುಷಿಯಲ್ಲಿ ಇರುವಾಗಲೇ ದೊಡ್ಡ ಶಾಕೊಂದು ಎದುರಾಗಿದೆ. ರಸ್ತೆ ಮರುಡಾಮರಿಕರಣ ಕಾಮಗಾರಿ ಪೂರ್ತಿಯಾಗಿ ಎರಡು ತಿಂಗಳು ಕಳೆಯುವುದರೊಳಗೆ ಡಾಮರು ಕಿತ್ತು ಹೋಗುತ್ತಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ.

ಉಪ್ಪಿನಂಗಡಿ – ಕಡಬ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಗೋಳಿತ್ತಡಿ ಎಂಬಲ್ಲಿ ಕವಲೊಡೆದ ಗೋಳಿತ್ತಡಿ- ನೆಲ್ಯೋಟ್ಟು ರಸ್ತೆಗೆ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ ಮರುಡಾಮರೀಕರ ಕಾಮಗಾರಿ ಕಳಪೆಯಿಂದಾಗಿ ಇದೀಗ ಎರಡು ತಿಂಗಳೊಳಗೆ ಡಾಮರು ಕಿತ್ತುಕೊಂಡು ಹೊಂಡಗಳು ನಿರ್ಮಾಣವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಗೋಳಿತ್ತಡಿ-ಏಣಿತ್ತಡ್ಕ ರಸ್ತೆ ಅಭಿವೃದ್ದಿಗೊಳಿಸುವಂತೆ  ಈ ಭಾಗದ ಜನತೆ ಸಂಬಂಧಪಟ್ಟವರ ಮುಂದೆ ಬೇಡಿಕೆ ಇಡುತ್ತಲೇ ಬಂದ ಪರಿಣಾಮ ಮೂರು ಭಾರಿ ತೇಪೆ ಕಾರ್ಯ ನಡೆಯಿತು. ಬಳಿಕ ಸುಳ್ಯ ಶಾಸಕ ಎಸ್. ಅಂಗಾರರವರ ಅನುದಾನದಲ್ಲಿ ಇದೇ ರಸ್ತೆಯ ತ್ರಿವೇಣಿ ಸರ್ಕಲ್ ಎಂಬಲ್ಲಿಂದ ಸಬಳೂರು ತನಕ   ಮರು ಡಾಮರಿಕರಣಗೊಳಿಸಲಾಗಿದ್ದು, ಈ ಕಾಮಗಾರಿ ನಡೆದು ಹಲವು ವರ್ಷಗಳೇ ಸಂದರೂ ಸುಸಜ್ಜಿತವಾಗಿದೆ. ಸಬಳೂರು ಎಂಬಲ್ಲಿಂದ ಏಣಿತ್ತಡ್ಕ ತನಕ ಕಳೆದ ಮೇ ತಿಂಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮರುಡಾಮರಿಕರಣಗೊಳಿಸಲಾಯಿತು. ಗೋಳಿತ್ತಡಿಯಿಂದ – ನೆಲ್ಯೊಟ್ಟು ತನಕ ಸುಮಾರು 2 ಕಿ.ಮೀ. ರಸ್ತೆಯನ್ನು ನಬಾರ್ಡ್ ಯೋಜನೆಯಿಂದ 46 ಲಕ್ಷ ರೂ ವೆಚ್ಚದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಮರು ಡಾಮರಿಕರಣಗೊಳಸಲಾಯಿತು. ಇದೀಗ ಮಳೆ ಆರಂಭವಾಗುತ್ತಿದ್ದಂತೆ ಈ ರಸ್ತೆ ಅಲ್ಲಲ್ಲಿ ಕಿತ್ತುಕೊಂಡಿದ್ದು ಹೊಂಡ ಕೆಸರು ರಸ್ತೆಯಾಗಿ ಮಾರ್ಪಡಾಗುತ್ತಿದೆ.

Also Read  ಪಡುಬಿದ್ರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ನಗದು ಜಪ್ತಿ ➤ ಕಾರು ವಶಕ್ಕೆ

ಕಾಮಗಾರಿಯ ಆರಂಭದಲ್ಲೇ ಡಾಮರೀಕರಣ ಮಾಡುವ ಕೆಲವೊಂದು ಮಾನದಂಡವನ್ನು ಇಲ್ಲಿ ಪಾಲಿಸಿಲ್ಲ ಎನ್ನುವ ಆರೋಪವೂ ವ್ಯಕ್ತವಾಗಿತ್ತು. ಡಾಮರಿಕರಣಗೊಳಿಸುವಾಗ ತೆಳುವಾಗಿದೆ ಇದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎನ್ನುವ ಅನುಮಾನ ಸ್ಥಳೀಯರು ವ್ಯಕ್ತಪಡಿಸಿದ್ದರು.  ಕಾಮಗಾರಿ ನಡೆಯುವ ಸಂದರ್ಭ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಇಂಜಿನಿಯಾರ್ ಅವರನ್ನು ಪ್ರಶ್ನಿಸಿದಾಗ ಉದ್ದಟತನದ ಉತ್ತರ ನೀಡಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ಕಳಪೆ ಕಾಮಗಾರಿಗೆ ಇಂಜಿನಿಯರ್ ಸಂದೀಪ್ ಮತ್ತು ಗುತ್ತಿಗೆದಾರರು ನೇರ ಕಾರಣ ಎನ್ನುವ ಆರೋಪ ವ್ಯಕ್ತವಾಗಿದ್ದು, ಇವರ ವಿರುದ್ದ ಸಂಬಂಧಪಟ್ಟವರಿಗೆ ದೂರು ನೀಡಲು ಮುಂದಾಗಿದ್ದಾರೆ.

ಡಾಮರಿಕರಣ ಆರಂಭದಲ್ಲಿ ಮಣ್ಣಿನ ಕಾಮಗಾರಿ ನಡೆಯಿತು. ಬಳಿಕ ರಸ್ತೆಯಲ್ಲಿದ್ದ ಹಳೆ ಮೋರಿ ತೆರವುಗೊಳಿಸಿ ನಾಲ್ಕು ಮೋರಿ ರಚನೆ ಮಾಡಲಾಯಿತು. ಇದಾದ ಬಳಿಕ ದೊಡ್ಡ ಗಾತ್ರದ ಜಲ್ಲಿಗಳನ್ನು ಹರವಿ ಎರಡು ತಿಂಗಳುಗಳ ಕಾಲ ಹಾಗೇಯೆ ಬಿಡಲಾಯಿತು. ಇದರಿಂದ ರಸ್ತೆ ಸಂಚಾರವೇ ದುಸ್ತರವಾಗಿ ಹಲವು ವಾಹನಗಳು ಆಯ ತಪ್ಪಿ ಬಿದ್ದು ಹಾನಿಗೊಂಡಿದ್ದವು. ಬಾಡಿಗೆ ವಾಹನಗಳು ಇತ್ತ ಬರುವುದನ್ನೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ತೊಂದರೆಗೊಳಗಾದರು. ಈ ಬಗ್ಗೆ ಸಂಬಂಧಪಟ್ಟವರ ವಿರುದ್ದ ತಿರುಗಿಬಿದ್ದ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. ತಕ್ಷಣ ಕಾಮಗಾರಿ ಪೂರ್ತಿಗೊಳಿಸಲಾಗುವುದು ಪ್ರತಿಭಟನೆ ಕೈ ಬಿಡುವಂತೆ ಸ್ಥಳಿಯರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಿಂದೆ ಸರಿಯಲಾಗಿತ್ತು. ಇದಾದ ಕೆಲವೇ ದಿನದೊಳಗೆ ಡಾಮರಿಕರಣ ಆರಂಭಗೊಳಿಸಿ ಒಂದೇ ದಿನದಲ್ಲಿ ಸುಮಾರು 1.30 ಕಿಮೀ ಡಾಮರೀಕರಣಗೊಳಿಸಲಾಗಿತ್ತು. ಬಳಿಕದ ರಸ್ತೆಯನ್ನು ಮಾರನೇ ದಿನ ಮಧ್ಯಾಹ್ನದೊಳಗೆ ಮುಗಿಸಲಾಗಿ, ತುರಾತುರಿಯ ಕೆಲಸ ಮಾಡಿದ್ದರಿಂದ ಕಳಪೆಯಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

Also Read  ಕರಾವಳಿಯಲ್ಲಿ ಮುಂಗಾರು ಅಬ್ಬರ ➤ ಹೆಚ್ಚುತ್ತಿದೆ ಗುಡುಗು ಮಿಂಚಿನ ಆರ್ಭಟ

ಏಣಿತ್ತಡ್ಕ ಗಿರಿಜನ ಕಾಲೋನಿ, ಕುದುಲೂರು, ಕೊಲ್ಯ, ಪರಂಗಾಜೆ, ತಿಮರೆಗುಡ್ಡೆ, ನೀಡೇಲು, ಸಬಳೂರು, ಬುಡಲೂರು ಮೊದಲಾದ ಪ್ರದೇಶದ 500ಕ್ಕೂ ಹೆಚ್ಚು ಕುಟುಂಬಗಳಿಗೆ ಉಪಯೋಗಕ್ಕಿರುವ ಮತ್ತು   ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಭಜನಾ ಮಂದಿರ, ಮಸೀದಿಗಳಿಗೆ ಸಂಪರ್ಕ ಕಲ್ಪಿಸುವ ಈ ಬಹು ಉಪಯೋಗಿ ರಸ್ತೆ ಅಭಿವೃದ್ದಿಯಲ್ಲಿ ಸಂಬಂದಪಟ್ಟವರ ಕರ್ತವ್ಯ ಲೋಪದಿಂದ ಜನ ಸಂಕಷ್ಟಗೊಳಗಾಗಿದ್ದಾರೆ.

ಮರುಡಾಮರಿಕರಣಗೊಂಡ ರಸ್ತೆಯಂಚಿನಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ ಎನ್ನುವ ದಾಖಲೆಯನ್ನು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಪಂಚಾಯಿತಿ ರಾಜ್ ಇಲಾಖಾ ಸಾರ್ವಜನಿಕ ಸಂಪರ್ಕಧಿಕಾರಿ ನೀಡಿದ್ದಾರೆ. ಆದರೆ ನಾಲ್ಕು ಸೋಲಾರ್ ದೀಪವನ್ನು ತ್ರೀವೇಣಿ ಸರ್ಕಲ್ ಎಂಬಲ್ಲಿ ಒಂದೇ ಕಡೆ   ಆಳವಡಿಸಲಾಗಿದೆ.

ರಸ್ತೆ ಕಾಮಗಾರಿ ಈಗಾಗಲೇ ಮುಗಿದಿರುತ್ತದೆ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು.  ಡಾಮರು ರಸ್ತೆಯಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದ ಇಂಜಿನಿಯರ್, ಈ ವಿಚಾರವನ್ನು ದಯವಿಟ್ಟು ಪತ್ರಿಕೆಯಲ್ಲಿ ಪ್ರಕಟಿಸಬೇಡಿ ಎನ್ನುವ ಮನವಿಯನ್ನು ಮಾಡಿಕೊಂಡರು.

ಸಂದೀಪ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಲಾಖೆ ಪುತ್ತೂರು

error: Content is protected !!
Scroll to Top