(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.15. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ನಾವು ಬಿಡುವುದಿಲ್ಲ. ಬಿಜೆಪಿಯವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಬಿಜೆಪಿಯವರು ಹಚ್ಚುವ ಬೆಂಕಿಯನ್ನು ನಾವು ನಂದಿಸುವ ಕಾರ್ಯ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ರವರು ಜಿಲ್ಲೆಗೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರು ರಾಜ್ಯಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಬಿಜೆಪಿಯವರು ಬೆಂಕಿ ಹಚ್ಚೋದರಲ್ಲೇ ನಿಸ್ಸೀಮರು. ರಾಮಜನ್ಮಭೂಮಿ ವಿವಾದ, ಮಂಡಲ್ ಕಮಿಷನ್ ವರದಿ ಜಾರಿ ಸಂದರ್ಭಗಳಲ್ಲಿ ಇವರು ಸಮಾಜವನ್ನು ಒಡೆಯೋ ಕೆಲಸ ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಲು ನಾನೆಲ್ಲೂ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ರಮಾನಾಥ ರೈಯವರು ಶಾಂತಿಭಂಗ ಮಾಡುವವರನ್ನು ಬಂಧಿಸಲು ಸೂಚಿಸಿದ್ದಾರೆ. ಅದರಲ್ಲೇನೂ ತಪ್ಪಿಲ್ಲ. ಅದು ಕಲ್ಲಡ್ಕ ಪ್ರಭಾಕರ ಭಟ್ಟರೇ ಆಗಿರಲಿ, ಇನ್ಯಾರೇ ಆಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಮಂಗಳೂರಿನಲ್ಲಿ ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯ ಸರಕಾರವು ವಿನಾ ಕಾರಣ ಆರೋಪ ಹೊರಿಸಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರ ವಿರುದ್ಧ ಷಡ್ಯಂತ್ರ ಹೂಡುತ್ತಿದೆ. ಎಲ್ಲಿಯಾದರೂ ಅವರ ಬಂಧನವಾದಲ್ಲಿ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳೂರಿನಲ್ಲಿ ತಿಳಿಸಿದ್ದರು.