ಕತ್ತಲಲ್ಲಿ ಇದ್ದವರಿಗೆ ‘ಬೆಳಕಿನ ಭಾಗ್ಯ’ ► ನೀತಿ ತಂಡದಿಂದ ವಿನೂತನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.18. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ, ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿನೂತನ ಕಾರ್ಯಕ್ರಮಕ್ಕೆ ನೀತಿ ತಂಡದಿಂದ ಚಾಲನೆ ನೀಡಲಾಯಿತು.

ನೆಲ್ಯಾಡಿ ಕೊಣಾಲು ಪಾಂಡಿಬೆಟ್ಟು ಶಾಖೆಯ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಒಕ್ಕೆಜಾಲು ನಿವಾಸಿ ಸುಕುಮಾರನ್ ಅವರಿಗೆ ಮತ್ತು ಇಲ್ಲಿನ ದರ್ಖಾಸು ಎಂಬಲ್ಲಿನ ಮೂರು ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ. ಹಲವಾರು ವರ್ಷಗಳಿಂದ ಈ ಮನೆಯವರು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಲ್ಲಿನ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಅವರು ಸ್ಪಂದಿಸಿಲ್ಲ ಎಂಬುದಾಗಿ ಇವರು ದೂರುತ್ತಿದ್ದಾರೆ. ಕೊನೆಗೆ ನೀತಿ ತಂಡದ ಪದಾಧಿಕಾರಿಗಳು ಮೆಸ್ಕಾಂ ಇಲಾಖೆಗೆ ಈ ವಿಷಯವನ್ನು ತಿಳಿಸಿದ ಮೇರೆಗೆ ತಕ್ಷಣವೇ ಮೆಸ್ಕಾಂ ಇಲಾಖೆಯು ಈ ಬಡವರ ಪಾಲಿಗೆ ಬೆಳಕು ಕಲ್ಪಿಸಿದೆ. ಅದರಲ್ಲೂ ಸುಕುಮಾರನ್ ಎಂಬ ಹಿರಿ ಜೀವದ ಮನೆಗೆ ಬೆಳಕಿನ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ. ನೀತಿ ತಂಡದ ಸದಸ್ಯರು ಇಲ್ಲೇ ಸಮೀಪದ ಮನೆಯವರಿಗೆ ಮಾತನಾಡಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರು. ತನ್ನ ಮನೆಗೆ ನೀತಿ ತಂಡದ ಸದಸ್ಯರನ್ನು ಕರೆಸಿದ ಸುಕುಮಾರನ್ ತನ್ನ ಸಂತೋಷವನ್ನು ವರ್ಣಿಸಿ ಸಿಹಿತಿಂಡಿ ಹಂಚುವಾಗ ಅವರ ಕಣ್ಣು ತುಂಬಿ ಬರುತ್ತಿತ್ತು. ನೀತಿ ತಂಡದ ನೆಲ್ಯಾಡಿ ವಲಯಾಧ್ಯಕ್ಷ ಅಬ್ರಹಾಂ ಅವರು ಕೆಲಸವನ್ನು ಶೀಘ್ರವಾಗಿ ಮಾಡಿ ಮುಗಿಸಲು ಶ್ರಮಿಸಿದ ಕಡಬ ಎಇಟಿ ಸಜಿಕುಮಾರ್ ಹಾಗೂ ಗುತ್ತಿಗೆದಾರರು ಮತ್ತು ಮೆಸ್ಕಾಂನ ಎಲ್ಲಾ ಅಧಿಕಾರಿಗಳಿಗೆ ವಂದನೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ನೀತಿ ತಂಡದ ನೆಲ್ಯಾಡಿ ವಲಯಾಧ್ಯಕ್ಷ ಅಬ್ರಹಾಂ, ಕಡಬ ವಲಯಾಧ್ಯಕ್ಷ ಪ್ರಕಾಶ್, ಕೊಣಾಲು ಶಾಖೆಯ ಕಾರ್ಯದರ್ಶಿ ಲಿತಿನ್ ಕುಮಾರ್, ಸದಸ್ಯರಾದ ಶಶಿಧರನ್, ವಿಶ್ವನಾಥ ಪೂಜಾರಿ, ಮಣಿ ಯಸ್., ಬಾಬು ಕೆ.ಟಿ, ಮುಂತಾದವರು ಉಪಸ್ಥಿತರಿದ್ದರು.

Also Read  ಮಂಗಳೂರಿನಲ್ಲಿ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಬಂಧನ

error: Content is protected !!
Scroll to Top