(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಕೋಡಿಂಬಾಳ ಸೇರಬೇಕಾದ ಗ್ರಾಮ ಸಡಕ್ ರಸ್ತೆಯು ಮಂಜೂರಾಗಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಸರುಮಯ, ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಘಟನೆ ಭಾನುವಾರದಂದು ನಡೆದಿದೆ.
ಕಲ್ಲಾಜೆಯಿಂದ ಅಂತಿಬೆಟ್ಟುವರೆಗಿನ ಸುಮಾರು ೫೦ಕ್ಕೂ ಮೆಲ್ಪಟ್ಟ ಗ್ರಾಮಸ್ಥರು ಒಟ್ಟಾಗಿ ಬೆಳಿಗ್ಗೆಯಿಂದ ಸಂಜೆಯ ತನಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ಥಿಗೊಳಿಸಿದ್ದಾರೆ. ಕಲ್ಲಾಜೆಯಿಂದ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಸುಮಾರು ಆರು ಕಿ.ಮೀ. ಉದ್ದದ ಕೆಸರುಮಯ ರಸ್ತೆಯು ಮಳೆಗಾಲದಲ್ಲಂತೂ ಕೆಸರುಮಯವಾಗಿದ್ದು, ಕೆಲವು ಕಡೆಗಳಲ್ಲಂತೂ ರಸ್ತೆಯಲ್ಲಯೇ ನೀರು ನಿಂತು ಕೆರೆಯಂತಾಗಿದ್ದು ದ್ವಿಚಕ್ರ ವಾಹನಗಳನ್ನು ಹೊಂದಿರುವವರು ತಮ್ಮ ವಾಹನವನ್ನು ಚಲಿಸಲಾಗದೆ ಸಂಕಷ್ಟಪಡುವುದು ಒಂದು ಕಡೆಯಾದರೆ, ಐತ್ತೂರು, ಮರ್ದಾಳ, ಸುಂಕದಕಟ್ಟೆ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು.
ಕಲ್ಲಾಜೆ – ಅಂತಿಬೆಟ್ಟು ರಸ್ತೆಯು ಐತ್ತೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿದ್ದು, ಗ್ರಾ.ಪಂ.ನಿಂದ ಯಾವುದೇ ದುರಸ್ಥಿ ಕಲ್ಪಿಸದೇ ಇದ್ದುದರಿಂದ ರಸ್ತೆಗೆ ಮೋರಿಗಳಿಲ್ಲದೆ ಚರಂಡಿ ನಿರ್ಮಾಣವಾಗದೇ ನಡೆದಾಡಲು ಸಾದ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ಗ್ರಾಮಸಭೆಗಳಲ್ಲಿ, ಜನಸಂಪರ್ಕ ಸಭೆಗಳಲ್ಲಿ, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಒತ್ತಾಯಿಸಿ ಸುಸ್ತಾಗಿರುವ ಗ್ರಾಮಸ್ಥರು ತಾವೇ ದುಡಿದು ಸಂಪಾದಿಸಿದ ಅಲ್ಪ ಹಣವನ್ನು ಈ ರಸ್ತೆಗಾಗಿ ಮೀಸಲಿಟ್ಟು ಎಲ್ಲಾ ಗ್ರಾಮಸ್ಥರು ರಾಜಕೀಯ ರಹಿತವಾಗಿ ಶ್ರಮದಾನದ ಮೂಲಕ ರಸ್ತೆ ಅಭಿವೃದ್ಧಿಗೆ ಮುಂದಾಗಿ ಬೇರೆ ಬೇರೆ ಕಡೆಗಳಿಂದ ಜೆಸಿಬಿ ಮೂಲಕ ಕಲ್ಲು, ಮಣ್ಣುಗಳನ್ನು ಶೇಖರಿಸಿ ಲಾರಿಗಳ ಮೂಲಕ ರಸ್ತೆಯ ಹೊಂಡ, ಗುಂಡಿಗಳಿಗೆ ತುಂಬಿ ಸದ್ಯಕ್ಕೆ ರಸ್ತೆಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವಂತೆ ಮಾಡಿದ್ದಾರೆ. ಗ್ರಾಮಸ್ಥರ ಒಗ್ಗಟ್ಟಿನ ಶ್ರಮದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟು ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಸಡಕ್ ರಸ್ತೆ ಏನಾಯಿತು..? : ಕಳೆದ ನಾಲ್ಕೈದು ವರ್ಷದ ಹಿಂದೆ ಈ ಭಾಗದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಕಲ್ಲಾಜೆ- ಅಂತಿಬೆಟ್ಟು- ಕೋರಿಯಾರ್ ರಸ್ತೆಯನ್ನ ಗ್ರಾಮ ಸಡಕ್ ಯೋಜನೆಯಲ್ಲಿ ಸೇರಿಸಲಾಗಿದ್ದು, ಕೂಡಲೇ ರಸ್ತೆಯು ಗ್ರಾಮ ಸಡಕ್ ಯೋಜನೆಯಲ್ಲಿ ಸಂಪೂರ್ಣ ಡಾಮರೀಕರಣಗೊಂಡು ದುರಸ್ಥಿಯಾಗಲಿದೆ. ಈ ಭಾಗದ ಗ್ರಾಮಸ್ಥರ ಬೇಡಿಕೆ ಈಡೇರಿದಂತಾಗಿದೆ ಎಂಬ ಭರವಸೆಯೊಂದಿಗೆ ಜನಪ್ರತಿನಿಧಿಗಳು ಗ್ರಾಮಸ್ಥರಲ್ಲಿ ತಿಳಿಸಿದಲ್ಲದೇ, ರಸ್ತೆ ಹಾದು ಹೋಗುವ ಕೆಲವು ಭಾಗಗಳಲ್ಲಿ ಅಗಲ ಕಿರಿದಾಗಿದ್ದು ಇಕ್ಕೆಡೆಗಳಲ್ಲಿ ಅಡಿಕೆ ತೋಟವಿದ್ದರೂ ರಸ್ತೆಗೆ ಬೇಕಾಗಿ ಅಡಿಕೆ ಮರಗಳನ್ನು ಕಡಿದುಕೊಡುವಂತೆ ವಿನಂತಿಸಿಕೊಂಡಿದ್ದು ಸಂಪೂರ್ಣ ಸಹಕರಿಸಿದ್ದ ಗ್ರಾಮಸ್ಥರು ತಮ್ಮ ತೋಟದ ಅಡಿಕೆ ಮರಗಳು ಹೋದರು ಚಿಂತೆ ಇಲ್ಲ ನಮಗೆ ಅತ್ಯುತ್ತಮ ಸಡಕ್ ರಸ್ತೆ ಆಗುತ್ತದಲ್ಲ ಎಂಬ ಉದ್ದೇಶದಿಂದ ತಮ್ಮ ತೋಟದ ಅಡಿಕೆ ಮರಗಳನ್ನ ಕಡಿದು ನಾಲ್ಕು ವರ್ಷಗಳೇ ಕಳೆದರೂ ಗ್ರಾಮ ಸಡಕ್ ರಸ್ತೆ ಮಾತ್ರ ಗ್ರಾಮಸ್ಥರಿಗೆ ಇಲ್ಲದಂತಾಗಿದೆ.
ಚುನಾವಣೆ ಬರುವ ಸಂದರ್ಭದಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರುಗಳು ಗ್ರಾಮಸ್ಥರ ಮನೆಗಳಿಗೆ ಬಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿರುವ ರಾಜಕಾರಣಿಗಳಿಗೆ ಚುನಾವಣೆ ಮುಗಿದ ಬಳಿಕ ಮತ್ತೆ ನೆನಪಾಗುವುದು ಮುಂದಿನ ಚುನಾವಣೆ ಸಂದರ್ಭದಲ್ಲಿ ಎಂದು ದೂರಿಕೊಂಡ ಗ್ರಾಮಸ್ಥರು ಹೀಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾದ್ಯ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿ ಊರಿನ ಅಭಿವೃದ್ಧಿಯತ್ತ ಗಮನ ಹರಿಸಬೇಕಾದುದು ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ಜವಾಬ್ದಾರಿಯಾಗಿದ್ದು, ಈ ರಸ್ತೆಯ ಪರಿಸ್ಥಿಯನ್ನು ಕಂಡರೆ ನಮಗೇಕೆ ಮತದಾನ ಎಂಬ ಭ್ರಮ ನಿರಸನ ಉಂಟಾಗುತ್ತದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.
ಚುನಾವಣೆಗಳು ಬರುತ್ತಲೇ ಇವೆ. ವಿವಿಧ ರಾಜಕೀಯ ಪಕ್ಷದ ನಾಯಕರು ಚುನಾವಣೆಯಲ್ಲಿ ಸ್ಪರ್ದಿಸುತ್ತಲೇ ಇದ್ದಾರೆ. ರಾಜಕೀಯ ತಂತ್ರಗಾರಿಕೆಯಿಂದ ಗೆಲುವನ್ನೂ ಸಾಧಿಸುತ್ತಲೇ ಇದ್ದಾರೆ. ಆದರೇ ನಮ್ಮ ಕಲ್ಲಾಜೆ ಅಂತಿಬೆಟ್ಟು ರಸ್ತೆಯ ಅವ್ಯವಸ್ಥೆ ಹಾಗೆಯೇ ಉಳಿದಿದೆ. ಇನ್ನಾದರೂ ಮುಂದಿನ ಚುನಾವಣೆಗೆ ಮೊದಲು ಜನಪ್ರತಿನಿಧಿಗಳು ಈ ರಸ್ತೆಯನ್ನು ದುರಸ್ಥಿ ಮಾಡಿಯಾರೇ ಎಂಬ ಪ್ರಶ್ನೆಗಳು ಕಾಡುತ್ತಿದ್ದು ಮುಂದಿನ ಚುನಾವಣೆಗೆ ಮೊದಲು ರಸ್ತೆ ಡಾಮರೀಕರಣಗೊಂಡು ಸಾರ್ವಜನಿಕ ಉತ್ತಮ ರಸ್ತೆಯಾಗಿ ಅಭಿವೃದ್ಧಿಯಾಗದಿದ್ದಲ್ಲಿ ಮುಂದಿನ ಚುನಾವಣೆಯನ್ನು ಯುವ ಸಮುದಾಯದ ನೇತೃತ್ವದಲ್ಲಿ ಬಹಿಷ್ಕರಿಸುವುದಲ್ಲದೇ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಗ್ರಾಮಸ್ಥರು ಒಟ್ಟಿನಲ್ಲಿ ದೇಶಾದ್ಯಂತ ಪ್ರತೀ ಗ್ರಾಮ ಗ್ರಾಮಗಳು ಅಭಿವೃದ್ಧಿಯಾಗುತ್ತಿದ್ದರೆ ನಮ್ಮ ಈ ಭಾಗದ ಅಭಿವೃದ್ಧಿ ಯಾಕಾಗುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ ಎಂದರು.