ಕಡಬ ತಾಲೂಕು ಕಾರ್ಯಾರಂಭಕ್ಕೆ ಅಧಿಕಾರಿಗಳಿಂದ ಭರದ ಸಿದ್ಧತೆ ► ಕೋರ್ಟ್ ಸೇರಿದಂತೆ ಹೆಚ್ಚಿನ ಇಲಾಖೆಗಳು ಬಂಟ್ರ ಗ್ರಾಮದ ಮುಂಚಿಕಾಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ನೂತನ ಕಡಬ ತಾಲೂಕು ಅನುಷ್ಠಾನಗೊಂಡು ಉದ್ಘಾಟನಾ ಭಾಗ್ಯಕ್ಕೆ ಕಾಲ ಸನ್ನಿಹಿತವಾಗಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಪುತ್ತೂರು ತಾಲೂಕಿನ 35 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 42 ಗ್ರಾಮಗಳ ವ್ಯಾಪ್ತಿಯ ನೂತನ ಕಡಬ ತಾಲೂಕು ರೂಪುಗೊಂಡಿದ್ದು, ಹೊಸ ತಾಲೂಕಿನ ಒಟ್ಟು ಜನಸಂಖ್ಯೆ 1,20,086 (2011ರ ಜನಗಣತಿಯಂತೆ) ಇದ್ದು, ಒಟ್ಟು 149159.8 ಎಕರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ. ನೂತನ ತಾಲೂಕಿನಲ್ಲಿ 20 ಗ್ರಾಮಗಳನ್ನೊಳಗೊಂಡು ಕಡಬ ಹಾಗೂ 22 ಗ್ರಾಮಗಳನ್ನು ಸೇರಿಸಿ ಆಲಂಕಾರು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ.

ಕಡಬವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕೆಂದು ಅಂದಿನ ರಾಮಕೃಷ್ಣ ಹೆಗಡೆ ಕಾಲದಿಂದ ಇಂದಿನವರೆಗೆ ಹಲವು ದಶಕಗಳಿಂದ ಹೋರಾಟ ಮಾಡುತ್ತಾ ಬಂದ ಫಲವಾಗಿ ಇಲ್ಲಿ ವಿಶೇಷ ತಹಶೀಲ್ದಾರ್ ಹುದ್ದೆ ಮಂಜೂರಾಗಿ ನೂತನ ತಹಶೀಲ್ದಾರ್ ಕಛೇರಿ ಆರಂಭಗೊಂಡ ನಂತರ ತಾಲೂಕಿಗೆ ಸಂಬಂಧಪಟ್ಟ ಬಹುತೇಕ ಎಲ್ಲಾ ಕೆಲಸಗಳು ಕಡಬದಲ್ಲಿಯೇ ನಡೆಯುತ್ತಿದೆ. ಈ ಕಾರಣದಿಂದಾಗಿ ಎಲ್ಲಾ 42 ಗ್ರಾಮಸ್ಥರು ತಮ್ಮ ಕಛೇರಿ ಕೆಲಸಗಳಿಗಾಗಿ ತಾಲೂಕು ಕೇಂದ್ರವಾದ ಕಡಬವನ್ನೇ ಅವಲಂಬಿಸುವಂತಾಗಿದೆ. ಕಂದಾಯ ಇಲಾಖೆ, ಸುಸಜ್ಜಿತ ಮಿನಿ ವಿಧಾನಸೌಧ, ಭೂಮಾಪನಾ ಇಲಾಖೆಯ ಕಛೇರಿ, ಆಹಾರ ನಿರೀಕ್ಷಕರ ಕಛೇರಿ, ಉಪ ನೋಂದಣಿ ಇಲಾಖೆಯ ಕಛೇರಿ, ಪತ್ರಾಂಕಿತ ಉಪಖಜಾನೆ, ಕಾನೂನು ಮಾಪನ ಶಾಸ್ತ್ರ ಇಲಾಖಾ ಕಛೇರಿ, ತಾಲೂಕು ಪಂಚಾಯತ್ ವ್ಯವಸ್ಥೆ ಮತ್ತು ಕಚೇರಿ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳು ಈಗಾಗಲೇ ಕಡಬ ಪೇಟೆಯ ಪರಿಸರದಲ್ಲೇ ಸ್ವಂತ ಭೂಮಿಯನ್ನು ಹೊಂದಿವೆ.

Also Read  ಪ್ರೀತಿ ಗೆಹ್ಲೋತ್‌ ಸೇರಿ 3 ಐಎಎಸ್ ಅಧಿಕಾರಿಗಳ ವರ್ಗಾವಣೆ

ಇನ್ನುಳಿದಂತೆ ನ್ಯಾಯಾಲಯ ಸಮುಚ್ಚಯ, ಅಗ್ನಿಶಾಮಕ ದಳದ ಕಛೇರಿ, ಕೃಷಿ ಇಲಾಖಾ ತಾಲೂಕು ಮಟ್ಟದ ಕಛೇರಿ, ತೋಟಗಾರಿಕೆ ಇಲಾಖಾ ತಾಲೂಕು ಮಟ್ಟದ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಛೇರಿ, ಸಮಾಜ ಕಲ್ಯಾಣ ಇಲಾಖಾ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಛೇರಿ, ಲೋಕೋಪಯೋಗಿ ಇಲಾಖಾ ಕಛೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖಾ ಕಛೇರಿ, ಅಬಕಾರಿ ಇಲಾಖಾ ಕಛೇರಿ, ವಾಣಿಜ್ಯ ತೆರಿಗೆ ಇಲಾಖಾ ಕಛೇರಿ, ಅರಣ್ಯ ಇಲಾಖಾ ಕಛೇರಿ, ಗ್ರಂಥಾಲಯ, ಪ್ರತ್ಯೇಕ ಎಪಿಎಂಸಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಬಂಟ್ರ ಗ್ರಾಮದ ಮುಂಚಿಕಾಪು ಎಂಬಲ್ಲಿ ಒಟ್ಟು 11.40 ಎಕರೆ ಜಮೀನನ್ನು ಕಾದಿರಿಸಲಾಗಿದ್ದು, ಹೆಚ್ಚಿನ ಎಲ್ಲಾ ಇಲಾಖೆಗಳನ್ನು ಒಂದೇ ಪರಿಸರಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿ – 37 ಹಾದು ಹೋಗಿರುವ ಮರ್ಧಾಳವೂ ಕಡಬದ ಪ್ರಮುಖ ಭಾಗವಾಗಿ ಮುಂದಿನ ದಿನಗಳಲ್ಲಿ ಗುರುತಿಸಲ್ಪಡಲಿದೆ. ಅದಕ್ಕೆ ಪೂರಕವೆಂಬಂತೆ 333 ಕೊಠಡಿಗಳನ್ನೊಳಗೊಂಡ ಬೃಹತ್ ರೆಸಾರ್ಟೊಂದು ತಲೆಯೆತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ಈ ನಡುವೆ ಕಡಬ ಹಾಗೂ ಕೋಡಿಂಬಾಳ ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಇತ್ತೀಚೆಗೆ ತಾಲೂಕು ಅನುಷ್ಠಾನ ಸಂಬಂಧ ಕಡಬದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದ ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಅವರು ವಿವಿಧ ಇಲಾಖೆಗಳಿಗಾಗಿ ಜಮೀನನ್ನು ಕಾದಿರಿಸಿದ ಬಂಟ್ರ ಗ್ರಾ.ಪಂ.ಗೆ ಒಳಪಟ್ಟ ಮುಂಚಿಕಾಪು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂಟ್ರ ಗ್ರಾಮವನ್ನೂ ಕಡಬ ಪಟ್ಟಣ ಪಂಚಾಯತ್ ಗೆ ಸೇರಿಸುವಂತೆ ಕಾರ್ಯಸೂಚಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಲೂಕು ಅನುಷ್ಠಾನದ ಕಾರ್ಯ ಆರಂಭಗೊಂಡಿರುವಂತೆಯೇ ಕಡಬ ತಾಲೂಕು ವ್ಯಾಪ್ತಿಯಲ್ಲಿ ಮಕಾಡೆ ಮಲಗಿದ್ದ ಲ್ಯಾಂಡ್ ಲಿಂಕ್ಸ್ ವ್ಯವಹಾರವೂ ಗರಿಗೆದರತೊಡಗಿದ್ದು, ಖಾಸಗಿ ಜಮೀನುಗಳ ಮೌಲ್ಯವೂ ಏರತೊಡಗಿದೆ.

Also Read  ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧನ

ದಕ್ಷಿಣ ಭಾರತದ ಪ್ರತಿಷ್ಠಿತ ಹಾಗೂ ರಾಜ್ಯದ ಆದಾಯ ಸಂಪನ್ನ ದೇವಸ್ಥಾನವಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕಡಬ ತಾಲೂಕಿಗೆ ಸೇರ್ಪಡೆಯಾಗಿದ್ದು, ಕಡಬದ ಭೂಪಟದಲ್ಲಿ ಶ್ರೀಮಂತ  ಸುಬ್ರಹ್ಮಣ್ಯ ದೇವಸ್ಥಾನದ ಹೆಸರು ಇನ್ನು ರಾರಾಜಿಸಲಿರುವುದು ತಾಲೂಕಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ತಾಲೂಕಿಗೆ ಸಂಬಂಧಪಟ್ಟ ಕಾರ್ಯವು ಪ್ರಗತಿಯಲ್ಲಿರುವುದರಿಂದ ಮುಂದಿನ ಕೆಲವೇ ಸಮಯಗಳಲ್ಲಿ ಕಡಬವು ಪರಿಪೂರ್ಣ ತಾಲೂಕಾಗಿ ಕಂಗೊಳಿಸಲಿದೆ.

error: Content is protected !!
Scroll to Top