(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.16. ಶವವನ್ನಿಟ್ಟು ರಾಜಕೀಯ ಮಾಡುವಂತಹ ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಹಿಂದೂ ಮಹಿಳೆಯೋರ್ವರ ಮೃತದೇಹವನ್ನು ಮುಸ್ಲಿಂ ಬಾಂಧವರು ಹಣ ಸಂಗ್ರಹಿಸಿ ಅಂತ್ಯಸಂಸ್ಕಾರಗೈದ ಅಪರೂಪದ ಘಟನೆ ಪುತ್ತೂರಿನಲ್ಲಿ ಶನಿವಾರದಂದು ನಡೆದಿದೆ.
ಪುತ್ತೂರಿನ ಕಬಕ ಗ್ರಾಮದ ವಿದ್ಯಾಪುರ ಕಾಲನಿ ನಿವಾಸಿ ದಿ. ನಾರಾಯಣ ಸಿಂಗ್ ಎಂಬವರ ಪುತ್ರಿ ಭವಾನಿ (52 ವ.) ಶನಿವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತನ್ನ ಚಿಕ್ಕಪ್ಪನ ಮಗನ ಮನೆಯಲ್ಲಿ ವಾಸವಾಗಿದ್ದ ಭವಾನಿಯವರು ಮೃತಪಟ್ಟ ವಿಚಾರವನ್ನು ಅವರ ಸಹೋದರಗೊಗೆ ತಿಳಿಸಲಾಗಿತ್ತಾದರೂ ಯಾರೂ ಆಗಮಿಸದೆ ಇದ್ದುದನ್ನು ಅರಿತ ಸ್ಥಳೀಯ ಕೆಲವು ಮುಸ್ಲಿಂ ಯುವಕರು ಹಣವನ್ನು ಸಂಗ್ರಹಿಸಿದ್ದಾರೆ. ಹಣವಿಲ್ಲದ ವಿಚಾರ ತಿಳಿದ ಅಕ್ಕಪಕ್ಕದ ಹಿಂದೂ, ಮುಸ್ಲೀಂ ಮಹಿಳೆಯರು ತಮ್ಮಲ್ಲಿದ್ದ ಬೀಡಿ ಕಟ್ಟಿದ್ದ ಹಣವನ್ನು ತಂದು ಯುವಕರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿಷಯ ತಿಳಿದ ಪುತ್ತೂರು ನಗರ ಠಾಣಾ ಬೀಟ್ ಸಿಬ್ಬಂದಿ ಮಂಜುನಾಥರವರು ಮೃತರ ಮನೆಗೆ ತೆರಳಿದಾಗ ಪರಿಸ್ಥಿತಿಯನ್ನು ಕಂಡ ಮರುಗಿದ್ದು, ತಾನೂ ಕೈಲಾದ ಸಹಾಯವನ್ನು ನೀಡಿದ್ದಾರೆ. ಆ ಬಳಿಕ ಮುಸ್ಲಿಂ ಬಾಂಧವರು ಪುತ್ತೂರಿನ ಮಡಿವಾಳ ಕಟ್ಟೆಯ ಹಿಂದು ರುದ್ರಭೂಮಿಯಲ್ಲಿ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದು, ಇದೀಗ ಮುಸ್ಲೀಂ ಬಾಂಧವರ ಈ ನಡೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.